ಬಂಟ್ವಾಳ, ಜು 27: ಬಂಟ್ವಾಳ ರೈಲ್ವೆ ನಿಲ್ದಾಣದ ದ್ವಾರದ ಬಳಿ ಓರ್ವ ವ್ಯಕ್ತಿ ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಬಗ್ಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಬಂಟ್ವಾಳ ಅಪರಾಧ ಪತ್ತೆ ವಿಭಾಗದ ಪಿ ಎಸ್ ಐ ಹರೀಶ್ ಎಚ್ ಆರ್ ಮತ್ತು ಸಿಬ್ಬಂದಿ, ಆತನನ್ನು ವಿಚಾರಣೆ ನಡೆಸಿದಾಗ ಕಳವು ಪ್ರಕರಣವೊಂದು ಬೆಳಕಿಗೆ ಬಂದಿದೆ.
ಈತನ ಕೈಯಲ್ಲಿ ಇದ್ದ ಬ್ಯಾಗ್ ನ್ನು ತೆರದು ನೋಡಿದಾಗ ಬೆಳ್ಳಿ ಹಾಗೂ ಚಿನ್ನ ಆಭರಣಗಳು ಹಾಗೂ 52, 390 ರೂ ನಗದು ಹಣ ಕಂಡು ಬಂದಿದ್ದು ಇವುಗಳ ಬಗ್ಗೆ ಯಾವುದೇ ಸಮರ್ಪಕವಾದ ಉತ್ತರ ಅಥವಾ ದಾಖಲಾತಿಯನ್ನು ನೀಡದಿದ್ದು, ಆರೋಪಿತನನ್ನು ಇನ್ನು ಕೂಲಂಕುಶವಾಗಿ ವಿಚಾರಿಸಿದಾಗ ಭಟ್ಕಳ ತಾಲೂಕು ಶಿರಾಲಿ ಎಂಬ ಮನೆಯಿಂದ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಆತನ ಬಳಿಯಿದ್ದ ಆಭರಣಗಳನ್ನು ಹಾಗೂ ನಗದು ಹಣವನ್ನು ಪೊಲೀಸರು ಸ್ವಾದೀನ ಪಡಿಸಿಕೊಂಡಿದ್ದಾರೆ. ಒಟ್ಟು 4,75,021 ರೂ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ಹಾಗೂ 52,390 ರೂ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ.