ಮಂಗಳೂರು, ಜು 26: ನಾಳೆ ಈ ಶತಮಾನದ ಅತ್ಯಂತ ದೀರ್ಘಾವಧಿಯ ಚಂದ್ರಗ್ರಹಣ ಗೋಚರವಾಗಲಿದೆ. ವರ್ಷದ ಎರಡನೇ ಚಂದ್ರಗ್ರಹಣವನ್ನು ನೋಡಲು ಜಗತ್ತಿನೆಲ್ಲೆಡೆ ಜನರು ತಯಾರಾಗಿದ್ದಾರೆ. ಶತಮಾನದ ಸುದೀರ್ಘ ಚಂದ್ರಗ್ರಹಣವಾಗಿದ್ದು ಎಲ್ಲೆಡೆ ಕುತೂಹಲ ಮನೆ ಮಾಡಿದೆ. ಜುಲೈ 27 ರಂದು ಸಂಭವಿಸಲಿರುವ ಚಂದ್ರಗ್ರಹಣವೂ ರಕ್ತ ಚಂದ್ರಗ್ರಹಣವಾಗಿದ್ದು, ಚಂದ್ರ ಕೆಂಪಾಗಿ ಗೋಚರಿಸಲಿದ್ದಾನೆ.
ರಾತ್ರಿ ೧೧.೪೪ಕ್ಕೆ ಚಂದ್ರ ಗ್ರಹಣ ಆರಂಭಗೊಳ್ಳಲಿದೆ. ಪೂರ್ಣ ಚಂದ್ರ ಗ್ರಹಣ ರಾತ್ರಿಯ 1 ಗಂಟೆಗೆ ಗೋಚರಿಸುವ ಸಾಧ್ಯತೆ ಇದೆ. ಮುಂಜಾನೆ 4.58ರ ತನಕ ಗ್ರಹಣ ಮುಂದುವರೆಯಲಿದೆ. ಒಟ್ಟು ಒಂದು ಗಂಟೆ 43 ನಿಮಿಷಗಳ ಕಾಲ ಭೂಮಿಯ ನೆರಳನ್ನು ಚಂದ್ರನ ಮೇಲೆ ನೋಡಬಹುದಾಗಿದೆ. ಇದು ಪೂರ್ಣ ಚಂದ್ರಗ್ರಹಣವಾದರೆ ಭಾಗಶಃ ಚಂದ್ರಗ್ರಹಣ ಸುಮಾರು 6 ಗಂಟೆಗಳಿಗೂ ಹೆಚ್ಚು ಕಾಲವಿರಲಿದೆ. ಈ ಸಂದರ್ಭ ರಕ್ತ ಚಂದಿರ ಅಥವಾ ಬ್ಲಡ್ ಮೂನ್ ಕೂಡ ನೋಡಬಹುದಾಗಿದೆ. ಆಗ ಚಂದ್ರ ಕೆಂಪಗಿನ ಬಣ್ಣದಲ್ಲಿ ಕಾಣಿಸುತ್ತದೆ. 2001 ರಿಂದ 2100 ರ ಅವಧಿಯಲ್ಲಿ ಇಂಥ ಗ್ರಹಣ ಸಂಭವಿಸಿಲ್ಲ. ಇನ್ನು ಇದೇ ವರ್ಷದ ಜನವರಿ 31 ರಂದು ಆಕಾಶದಲ್ಲಿ ಚಮಾತ್ಕಾರವೊಂದು ನಡೆದಿತ್ತು. ಸೂಪರ್ ಬ್ಲ್ಯೂ ಬ್ಲಡ್ ಮೂನ್ ಅನ್ನು ಜಗತ್ತಿನಾದ್ಯಂತ ಜನರು ಕಣ್ತುಂಬಿಸಿಕೊಂಡಿದ್ದರು. ಇದೀಗ ಎರಡನೇ ಚಂದ್ರಗ್ರಹಣ ಎದುರಾಗಿದೆ.