ಬಂಟ್ವಾಳ, ಜು 26: ಮನೆಯಲ್ಲಿ ಒಂಟಿಯಾಗಿದ್ದ ಗರ್ಭಿಣಿಗೆ ಚೂರಿ ತೋರಿಸಿ ಲಕ್ಷಾಂತರ ರೂ. ಮೌಲ್ಯದ ನಗ ನಗದು ದರೋಡೆ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಕುರಿಯಾಳ ಎಂಬಲ್ಲಿ ನಡೆದಿದೆ. ಇಲ್ಲಿನ ಕುರಿಯಾಳ ಗ್ರಾಮದ ಪಾಪುತಡ್ಕ ನಿವಾಸಿ ಜಗದೀಶ್ ಅವರ ಪತ್ನಿ ಮನೆಯಲ್ಲಿ ರಾಬರಿ ನಡೆದಿದೆ.
ಎಂಟು ತಿಂಗಳ ತುಂಬು ಗರ್ಭಿಣಿ ಒಂಟಿಯಾಗಿ ಮನೆಯಲ್ಲಿದ್ದ ವೇಳೆ ಮುಸುಕಿದಾರಿ ವ್ಯಕ್ತಿಯೋರ್ವ ಏಕಾಏಕಿ ಮನೆಗೆ ನುಗ್ಗಿ ಚಾಕು ತೋರಿಸಿ ಬಂಗಾರ ನೀಡುವಂತೆ ಬೆದರಿಸಿದ್ದಾನೆ. ಅಲ್ಲದೆ ಕಪಾಟಿನಲ್ಲಿದ್ದ ಸುಮಾರು ಎಂಟು ಪವನ್ ಚಿನ್ನ ಹಾಗೂ ಹದಿಮೂರು ಸಾವಿರ ರೂಪಾಯಿಗಳನ್ನು ದೋಚಿದ್ದಾನೆ ಎಂದು ಜಗದೀಶ್ ದೂರಿನಲ್ಲಿ ತಿಳಿಸಿದ್ದಾರೆ. ಇನ್ನು ಆತಂಕಗೊಂಡ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.