ಮಂಗಳೂರು, ಜು 27 : ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಸುತ್ತಮುತ್ತ ಪ್ರವಾಸಕ್ಕೆಂದು ತೆರಳಿದ್ದ ಮಂಗಳೂರಿನ 13 ಮಂದಿಯ ತಂಡದ ಪೈಕಿ ಇದ್ದ ಯುವಕನೋರ್ವ ನೀರುಪಾಲದ ಘಟನೆ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಅಂಬುತೀರ್ಥದ ಬಳಿ ಜು.26 ಬುಧವಾರ ನಡೆದಿದೆ. ನೀರುಪಾಲಾದ ಯುವಕನನ್ನು ಕಿರಣ್ ಕೊಟ್ಯಾನ್ (26) ಎಂದು ಗುರುತಿಸಲಾಗಿದೆ. ಇವರು ಅಂಬುತೀರ್ಥದ ಬಳಿ ಕಾಲು ಜಾರಿ ಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದ್ದು ಕಳಸ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗಳು ಕೊಚ್ಚಿ ಹೋಗಿರುವ ಕಿರಣ್ ಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಕಿರಣ್ ಜೊತೆಯಲ್ಲಿ ಬಂದ ತಂಡ ಸ್ಥಳದಲ್ಲಿದ್ದು, ಶೋಧಕಾರ್ಯಕ್ಕಾಗಿ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಕಿರಣ್ ಕೊಟ್ಯಾನ್ ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೆಂದು ತಿಳಿದು ಬಂದಿದ್ದು, ಕಳಸ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣದ ದಾಖಲಾಗಿದೆ.