ಜು, 25 : ಬಿಹಾರ ಮತ್ತು ಕೇಂದ್ರದ ಎನ್ಡಿಎ ಸರ್ಕಾರದ ಹಮ್ಮಿಕೊಂಡಿದ್ದ ಹೋರಾಟದ ಸೈಕಲ್ ಯಾತ್ರೆಯ ಸಂದರ್ಭ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಸೈಕಲ್ ನಿಂದ ಬಿದ್ದು ಯಡವಟ್ಟು ಮಾಡಿಕೊಂಡಿದ್ದಾರೆ. ಯಾತ್ರೆಯಲ್ಲಿ ಅತ್ಯಂತ ವೇಗವಾಗಿ ಸೈಕಲ್ ಚಲಾಯಿಸಿ ಸರ್ಕಲ್ನಲ್ಲಿ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ, ಅದೃಷ್ಟವಷಾತ್ ಯಾವುದೇ ಹಾನಿಯಿಲ್ಲದೆ ತೇಜ್ ಪ್ರತಾಪ್ ಪಾರಾಗಿದ್ದಾರೆ.
ಇದೀಗ ಇವರು ಬೀಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತೇಜ್ ಪ್ರತಾಪ್ ಬಿದ್ದ ಕೂಡಲೇ ಅವರ ಜೊತೆಯಲ್ಲಿ ಸಾಗುತ್ತಿದ್ದವರು, ಭದ್ರತಾ ಸಿಬಂದಿಗಳು ನೆರವಿಗೆ ಧಾವಿಸಿದರೂ, ಕೂಡಲೆ ಎದ್ದ ತೇಜ್ ವಿಚಲಿತರಾಗದೇ ಯಾತ್ರೆ ಮುಂದುವರಿಸಿದರು. ಇನ್ನು ಈ ವಿಚಾರ ವೈರಲ್ ಆಗುತ್ತಿದಂತೆ ಸ್ಪಷ್ಟನೆ ನೀಡಿರುವ ತೇಜ್ ಪ್ರತಾಪ್, ಜೀವನದಲ್ಲಿ ಜನರು ಬೀಳುವುದು ಸಹಜ. ಬಿದ್ದರೂ ಮತ್ತೆ ಹೆಚ್ಚಿನ ಶಕ್ತಿಯೊಂದಿದೆ ಮೇಲಕ್ಕೇಳಬೇಕು ಎಂದು ಹೇಳಿದ್ದಾರೆ.
ಲಾಲು ಪ್ರಸಾದ್ ಯಾದವ್ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ತೇಜ್ ಪ್ರತಾಪ್ ಆರ್ ಜೆಡಿ ಪಕ್ಷದಲ್ಲಿ ಹೆಚ್ಚು ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತೇಜ್ ಪ್ರತಾಪ್ ಯಾದವ್ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.