ಮಂಗಳೂರು, ಜು 26: ಶಾಲೆ ಮುಗಿಸಿ ಬರುವ ಸಂದರ್ಭ ರಸ್ತೆ ಬದಿಯಲ್ಲಿ ಬಿಸ್ಕತ್ತು ರಾಶಿ ರಾಶಿ ಕಾಣ ಸಿಕ್ಕರೆ ಹೇಗಾಗಿಬಹುದು ಮಕ್ಕಳಿಗೆ..? ಹಿಂದೂ ಮುಂದೆ ನೋಡದೆ ಪುಟಾಣಿಗಳು ಬಿಸ್ಕತ್ತು ಪ್ಯಾಕೆಟ್ ಗಳನ್ನು ಹೆಕ್ಕುವುದು ಸಹಜ..ಇಂಥದೊಂದು ಘಟನೆ ನಡೆದಿದ್ದು, ನಗರದ ಉರ್ವ ಮಾರ್ಕೆಟ್ ಸಮೀಪ ರಸ್ತೆ ಬದಿಯಲ್ಲಿ. ಜು 25 ರ ಬುಧವಾರ ಶಾಲೆ ಬಿಡುವ ಸಮಯದಲ್ಲಿ ವಿದ್ಯಾರ್ಥಿಗಳು ತಾ ಮುಂದು ನಾ ಮುಂದು ಎಂದು ಗುಂಪು ಕಟ್ಟಿದ್ದರು.
ಆ ಗುಂಪಿನಲ್ಲಿ ಕೆಲವರು ಕಿಸೆಯಲ್ಲಿ ಏನೋ ತುಂಬಿಸುವುದನ್ನು ನೋಡಿ ಸ್ಥಳೀಯರು ಕುತೂಹಲದಿಂದ ಆಗಮಿಸಿದಾಗ ಕಂಡು ಬಂದಿದ್ದು ಚೆಲ್ಲಾಪಿಲ್ಲಿಯಾಗಿದ್ದ ಬಿಸ್ಕತ್ ರಾಶಿ. ಗೋಡೌನ್ ನಲ್ಲಿ ಉಳಿದ ಸುಮಾರು 150 ಕೆ.ಜಿ ಗೂ ಮಿಕ್ಕಿ ಯುನಿಬಿಕ್ ಬಿಸ್ಕತ್ತನ್ನು ಮಾರ್ಗದ ಬದಿ ಯಾರೋ ತಂದು ಬಿಸಾಕಿ ಹೋಗಿದ್ದರು. ಬಿಸ್ಕತ್ತು ಪೊಟ್ಟಣದಲ್ಲಿ ಹುಡುಕಿದರೆ ಪ್ಯಾಕ್ ಆದ ದಿನಾಂಕವೂ ಕಂಡುಬಂದಿಲ್ಲ.
ಯಾರಾಗೇನಾದರೇನಂತೆ ಎಂದು ಬೇಜಾವಬ್ದಾರಿಯಾಗಿ ಬಿಸ್ಕತ್ತು ಬಿಸಾಕಿ ಹೋಗಿದ್ದರು.
ಇದನ್ನು ಗಮನಿಸಿದ ಸ್ಥಳೀಯರು ಹಾಗೂ ಸಾಮಾಜಿಕ ಕಾರ್ಯಕರ್ತ ಫ್ರಾಂಕ್ಲಿನ್ ಮೊಂತೆರೋ , ಬಿಸಾಕಿದ ಬಿಸ್ಕತ್ತು ಹಳೆಯದಾದರೆ ಫುಡ್ ಪಾಯ್ಸನ್ ಆಗಬಹುದು ಎಂಬ ಆತಂಕದಲ್ಲಿ ಮಹಾನಗರ ಪಾಲಿಕೆಗೆ ಮಾಹಿತಿ ಸ್ಥಳದಿಂದ ಪೊಟ್ಟಣಗಳನ್ನು ಸಂಗ್ರಹಿಸಿದಂತೆ ಮಕ್ಕಳಿಗೆ ಎಚ್ಚರಿಕೆ ನೀಡಿದರು.