ಪುತ್ತೂರು, ಸೆ 30: ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತ ಬಂಧನಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಜಗದೀಶ್ ಕಾರಂತ್ ಅವರನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ ಬೆನ್ನಲ್ಲೇ ಹಿಂದೂ ಪರ ಸಂಘಟನೆಗಳು ಪುತ್ತೂರಿನಲ್ಲಿ ತಡರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದರು.
ಪುತ್ತೂರು ಸರಕಾರಿ ಬಸ್ ನಿಲ್ದಾಣದ ಬಳಿ ಸೇರಿದ ಸಂಘಟನೆಗಳ ಕಾರ್ಯಕರ್ತರು ಕಾರಂತರ ಬಂಧನದ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕೈವಾಡವಿದೆ ಎಂದು ದೂರಿದರು. ಹಿಂದೂ ಜಾಗರಣ ವೇದಿಕೆ ಪುತ್ತೂರಿನಲ್ಲಿ ನಡೆಸಿದಂತಹ ಪ್ರತಿಭಟನೆಯಲ್ಲಿ ಜಗದೀಶ ಕಾರಂತರು ಸಂಪ್ಯ ಪೋಲೀಸ್ ಠಾಣಾಧಿಕಾರಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನುವ ಕ್ಷುಲ್ಲಕ ಕಾರಣವನ್ನಿಟ್ಟು, ಕಾನೂನಿನ ಪರಿಧಿಯನ್ನು ಮೀರಿ ಪೊಲೀಸರು ಕಾರಂತರನ್ನು ಬಂಧಿಸಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಮಾತ್ರವಲ್ಲದೇ, ಕಾರಂತರು ಭಾಷಣ ನಡೆಸಿದ ಒಂದು ವಾರದ ನಂತರ ಕೇಸು ದಾಖಲಿಸಿರುವುದು ಇದೀಗ ಅನುಮಾನಗಳಿಗೆ ಕಾರಣವಾಗಿದೆ. ಕಾರಂತರನ್ನು ಬಿಡುಗಡೆ ಮಾಡದೇ ಹೋದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಅಹಿತಕರ ಘಟನೆಗಳಿಗೆ ಸರಕಾರವೇ ಹೊಣೆಯಾಗಲಿದೆ ಎನ್ನುವ ಎಚ್ಚರಿಕೆಯನ್ನು ಪ್ರತಿಭಟನಕಾರರು ನೀಡಿದ್ದಾರೆ.