ಉಡುಪಿ, ಜು 23 : ಉಡುಪಿ ಶ್ರೀಕೃಷ್ಣ ಮಠದ ಸರಕಾರೀಕರಣವಾಗುತ್ತಾ? ಎನ್ನುವ ಪ್ರಶ್ನೆಗೆ 'ಸಾಧ್ಯತೆಗಳು ಹೆಚ್ಚಿವೆ' ಎನ್ನುತ್ತಿವೆ ಸಧ್ಯದ ವರದಿ. ಕಾರಣ ಶಿರೂರು ಶ್ರೀಗಳ ಅಸ್ವಾಭಾವಿಕ ಸಾವಿನ ಪ್ರಕರಣವೂ ಇದೀಗ ಶ್ರೀಕೃಷ್ಣ ಮಠದ ಸರಕಾರೀಕರಣಕ್ಕೆ ನಿಮಿತ್ತವಾಗುವ ಸಾಧ್ಯತೆಗಳು ದಟ್ಟವಾಗಿ ಕಂಡು ಬರುತ್ತಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಗುಪ್ತವಾಗಿ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಅನ್ನುವ ಸುದ್ದಿಯೂ ಹರಿದಾಡುತ್ತಿದೆ.
ಶಿರೂರು ಶ್ರೀಗಳು ವಿಧಿವಶರಾದ ಬಳಿಕ ಮಾಧ್ಯಮಗಳಲ್ಲಿ ನಾನಾ ರೀತಿಯ ವರದಿಗಳು ಬರುತ್ತಿದ್ದರೆ, ಅತ್ತ ಕಡೆ ದಿನಂಪ್ರತಿ ಬರುವ ವರದಿಗಳನ್ನು ಸರಕಾರಕ್ಕೆ ಪೊಲೀಸ್ ಇಲಾಖೆ ಸಲ್ಲಿಸುತ್ತಿದೆ. ಸ್ತ್ರೀ ಸಂಪರ್ಕ, ಮಧ್ಯಪಾನ , ಭೂ ಮಾಫಿಯಾ ಇತ್ಯಾದಿ ಅಂಶಗಳೂ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಎಲ್ಲಾ ಮಠಗಳನ್ನು ಮುಂದೆ ಜನರು ಸಂಶಯದ ಕಣ್ಣಿನಿಂದ ನೋಡುವ ಸಾಧ್ಯತೆಗಳೇ ಹೆಚ್ಚಿವೆ ಈ ಸಂದರ್ಭ ಬಳಸಿಕೊಂಡು ಕೆಲವರು ಮಠವನ್ನು ಸರಕಾರ ಸುಪರ್ದಿಗೆ ಪಡೆಯಲು ಒತ್ತಾಯಿಸುವ ಸಾಧ್ಯತೆ ಇದೆ.
ಇನ್ನೊಂದೆಡೆ ಮಠ ಸರ್ಕಾರದ ವಶಕ್ಕೆ ಪಡೆದರೆ ಬಲಪಂಥೀಯರನ್ನು ಸ್ವಲ್ಪ ಮಟ್ಟಿಗಾದರೂ ಕಟ್ಟಿ ಹಾಕಬಹುದೆಂಬ ಲೆಕ್ಕಚಾರವೂ ಇದೆ ಎನ್ನಲಾಗಿದೆ. ಹೀಗಾಗಿ ಸರ್ಕಾರ ಗುಪ್ತವಾಗಿ ಮಾಹಿತಿ, ದಾಖಲೆ ಕಲೆಹಾಕುತ್ತಿವೆ ಎನ್ನಲಾಗುತ್ತಿದೆ.