ಶಿರ್ವ, ಜು 24 : ನಾಗನಿಗೆಂದೇ ಮಣ್ಣಿನ ಮಡಿಕೆಯಲ್ಲಿ ಇರಿಸಲಾಗುವ ಶುದ್ಧ ತೀರ್ಥ ನೀರನ್ನು ನಾಗರ ಹಾವು ದಿನಂಪ್ರತಿ ಕುಡಿದು ಹೋಗುವ ಅಚ್ಚರಿಯ ಘಟನೆ ಕಟಪಾಡಿಯ ಕೋಟೆ ಗ್ರಾಮದ ಕಿನ್ನಿಗುಡ್ಡೆ ಬಬ್ಬು ಸ್ವಾಮಿಯ ನಾಗಬನದ ಸನ್ನಿದಿಯಲ್ಲಿ ನಡೆಯುತ್ತಿದೆ.
ಅಚ್ಚರಿಯಾದರೂ ಸತ್ಯ. ಕಿನ್ನಿಗುಡ್ಡೆಯಲ್ಲಿರುವ ಬಬ್ಬು ಸ್ವಾಮಿಯ ನಾಗಬನದಲ್ಲಿ ಎರಡು ಜತೆ ಮಡಿಕೆಗಳಿದ್ದು, ಇದನ್ನು ಪುರಾತನ ಕಾಲದಲ್ಲಿ ಪ್ರತಿಷ್ಠಾಪಿಸಲಾದ ನಾಗದೇವರ ಮೂರ್ತಿಯ ಮುಂದೆ ಇರಿಸುವುದು ಹಿಂದಿನಿಂದಲೂ ಬಂದ ವಾಡಿಕೆ. ಈ ಮಡಿಕೆಯನ್ನು ಪ್ರತಿದಿನ ಶುದ್ದಿಗೊಳಿಸಿ ಹತ್ತಿರದಲ್ಲೇ ಇರುವ ವೆಂಕಟರಮಣ ದೇವಸ್ಥಾನದ ದೇವರ ತೀರ್ಥ ಮತ್ತು ತುಳಸಿದಳವನ್ನು ಹಾಕಿ ಇಡಲಾಗುತ್ತದೆ. ದಿನನಿತ್ಯದ ಪೂಜೆ ಮುಗಿದು ಹೆಚ್ಚಿನ ಜನರೆಲ್ಲಾ ಅಲ್ಲಿಂದ ತೆರಳುತ್ತಿದ್ದಂತೆ ಇಲ್ಲಿ ನಾಗರ ಹಾವು ಪ್ರತ್ಯಕ್ಷವಾಗುತ್ತದೆ.
ಭಾನುವಾರ ಅಲ್ಲೇ ಇರುವ ದೈವಸ್ಥಾನದ ಸುತ್ತ ಇಂಟರ್ಲಾಕ್ ಹಾಕುವ ಉದ್ದೇಶದಿಂದ ಮಣ್ಣು ಅಗೆಯುವ ವೇಳೆ ಪೂಜೆ ನಡೆಯುತ್ತಿದ್ದಂತೆ, ಇದೆಲ್ಲದಕ್ಕೂ ಪೂರಕ ಎಂಬಂತೆ ಅಲ್ಲಿ ನಾಗರ ಹಾವೊಂದು ಪ್ರತ್ಯಕ್ಷವಾಗಿ ಅಲ್ಲಿಂದ ಹಾದು ಹೋಗಿದೆ. ಇಲ್ಲಿ ದಿನಂಪ್ರತಿ ಪೂಜೆ ಸಲ್ಲಿಸುವವರ ಪ್ರಕಾರ ಪುರಾತನ ಕಾಲದಿಂದಲೂ ನಾಗರಹಾವು ಇಲ್ಲಿಗೆ ಬಂದು ನೀರು ಕುಡಿದು ಹೋಗುತ್ತದೆ ಎಂಬ ವಿಚಾರವನ್ನು ಹಿರಿಯರು ಹೇಳುತ್ತಿದ್ದರಂತೆ. ಆದರೆ ಇದೀಗ ನಾಗದೇವರ ಪ್ರತ್ಯಕ್ಷ ದರ್ಶನವಾಗುತ್ತಿರುವುದು ರೋಮಾಂಚಕಾರಿ ವಿಚಾರವಾಗಿದೆ ಅನ್ನುತ್ತಾರೆ.