ಪುತ್ತೂರು, ಸೆ29: ಹಿಂದೂ ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಸಂಚಾಲಕ ಜಗದೀಶ್ ಕಾರಂತ್ ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪುತ್ತೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪುತ್ತೂರಿನಲ್ಲಿ ಹಿಂದೂ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಹಿಂದೂ ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಸಂಚಾಲಕ ಜಗದೀಶ್ ಕಾರಂತ್, ಪ್ರಚೋದನಕಾರಿ ಭಾಷಣ ಮಾಡಿದ್ದು ಮಾತ್ರವಲ್ಲದೆ, ಸುರತ್ಕಲ್ ಮಾದರಿಯ ಕೋಮು ಗಲಭೆ ನಡೆಸುವುದಾಗಿ ಮತ್ತು ಪೊಲೀಸ್ ಅಧಿಕಾರಿಯನ್ನು ತಲೆ ಬೋಳಿಸಿ, ಬೆತ್ತಲೆ ಮಾಡಿ ಕತ್ತೆ ಮೇಲೆ ಮೆರವಣಿಗೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಕಾರಂತರ ಪ್ರಚೋದನಕಾರಿ ಹೇಳಿಕೆಯ ವಿರುದ್ಧ, ಪೊಲೀಸರು ಈ ಹಿಂದೆಯೇ ಎಫ್ಐಆರ್ ದಾಖಲಿಸಿದ್ದರು. ಇದೀಗ ಕಾರಂತ್ ರನ್ನು ವಶಕ್ಕೆ ಪಡೆದಿರುವ ಪೊಲೀಸರು ಪುತ್ತೂರಿಗೆ ಕರೆತಂದಿದ್ದಾರೆ.