ಮಂಗಳೂರು, ಜು24: 2018ನೇ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್ ಸೂಪರ್ ಸ್ಪೆಶಾಲಿಟಿ) ಫಲಿತಾಂಶ ಪ್ರಕಟವಾಗಿದ್ದು, ಈ ಪರೀಕ್ಷೆಯಲ್ಲಿ ಮಂಗಳೂರಿನ ಡಾ. ಸಂಗೀತಾ ಕೆ. ಅಮೀನ್ ಮೊದಲ ಸ್ಥಾನ ಪಡೆಯುವುದರೊಂದಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ನೀಟ್ ಎಸ್.ಎಸ್ ಪರೀಕ್ಷೆ ಜು.6ರಂದು ದೇಶಾದ್ಯಂತ ನಡೆದಿತ್ತು. ಡಾ. ಸಂಗೀತಾ ಕೆ. ಅಮೀನ್ ಹೈದರ್ ಬಾದ್ ಸೆಂಟರ್ನಲ್ಲಿ ಪರೀಕ್ಷೆ (Gynecologic oncology) ಬರೆದಿದ್ದರು. ಇದೀಗ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಒಟ್ಟು 529 ಸ್ತ್ರೀ ರೋಗ ತಜ್ಞೆಯರಲ್ಲಿ ಮೊದಲ ಸ್ಥಾನ ಗಳಿಸುವ ಮೂಲಕ ಡಾ. ಸಂಗೀತಾ ಕೆ. ಅಮೀನ್ ಮಂಗಳೂರಿಗೆ ಕೀರ್ತಿ ತಂದಿದ್ದಾರೆ.
ಮಂಗಳೂರಿನ ಕುಂಜತ್ ಬೈಲ್ ಮಾಧವ್ ಕೋಟ್ಯಾನ್ ಮತ್ತು ಹೇಮಾವತಿ ಅಮೀನ್ ದಂಪತಿಯ ಪುತ್ರಿಯಾದ ಡಾ. ಸಂಗೀತಾ ಅಮೀನ್ ಕಳೆದ 5 ವರುಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಯೇನಪೋಯಾ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದಿರುವ ಇವರು ಜಿಲ್ಲೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರು. ಮಾತ್ರವಲ್ಲ, ಬಳ್ಳಾರಿಯ ವಿಜಯನಗರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ಕಾಲೇಜಿನಲ್ಲಿ ಎಂಎಸ್ ಪದವಿಯನ್ನು ಪೂರೈಸಿದ್ದಾರೆ. ಪ್ರಸ್ತುತ ಅಹಮದಾಬಾದ್ನಲ್ಲಿ ಎಂಸಿಎಚ್ (ಸ್ತ್ರೀ ರೋಗ ಕ್ಯಾನ್ಸರ್) ವ್ಯಾಸಂಗ ಮಾಡುತ್ತಿದ್ದಾರೆ.