ಮಂಗಳೂರು, ಸೆ 29: ನಗರದ ಕದ್ರಿ ಪೊಲೀಸ್ ಠಾಣೆಗೆ ಹುಲಿಗಳ ದಂಡು ದಾಳಿ ನಡೆಸಿದೆ. ಒಂದಲ್ಲ, ಎರಡಲ್ಲ ಹಲವಾರು ಹುಲಿಗಳ ತಂಡ ಪೊಲೀಸ್ ಠಾಣೆಗೆ ಎಂಟ್ರಿ ಕೊಟ್ಟಿದ್ದು ಎಲ್ಲರ ಚಿತ್ತವನ್ನು ಸೆಳೆದಿದೆ. ಆದರೆ ಈ ಹುಲಿಗಳ ದಾಳಿಯಿಂದ ಯಾರಿಗೂ ಯಾವುದೇ ರೀತಿಯ ತೊಂದರೆ ಆಗಿಲ್ಲ.. ಯಾಕಂದ್ರೆ ನೀವು ಅಂದುಕೊಂಡ ಹಾಗೆ ಇದು ಕಾಡಿನ ಹುಲಿಗಳಲ್ಲ. ಇದು ಮಾರ್ನೆಮಿ ಹುಲಿಗಳು..
ಕರಾವಳಿ ಕಡಲತಡಿಯಲ್ಲಿ ಮಾರ್ನೆಮಿ ಎಂದೇ ಕರೆಯಲ್ಪಡುವ ಮಂಗಳೂರಿನ ದಸರಾಕ್ಕೂ, ಹುಲಿಗಳ ಕುಣಿತಕ್ಕೂ ಅವಿನಾಭವ ಸಂಬಂಧ. ತುಳುನಾಡಿನ ಜನಪದ ಕಲೆಗಳಲ್ಲಿ ಒಂದಾದ ಈ ಹುಲಿವೇಷವನ್ನು ಆಡು ಭಾಷೆಯಲ್ಲಿ ಪಿಲಿ ಏಸ ಎಂದು ಹೇಳುತ್ತಾರೆ. ನವರಾತ್ರಿಯ ಶುಭ ದಿನ ಆರಂಭವಾಗುತ್ತಿಂದತೆ ಹುಲಿವೇಷಧಾರಿಗಳು ರಸ್ತೆಗಿಳಿಯುತ್ತಾರೆ. ಜನಪದ ಕಲೆ ಮತ್ತು ದೈವ ಶಕ್ತಿ ಹೊಂದಿರುವ ಹುಲಿವೇಷದ ಸೊಬಗನ್ನು ಕಣ್ತುಂಬಿಕೊಳ್ಳಲೆಂದೇ ಕರಾವಳಿಗರು ನವರಾತ್ರಿಯ ಶುಭ ಸಮಯಕ್ಕಾಗಿ ಕಾಯುತ್ತಿರುತ್ತಾರೆ. ಹುಲಿವೇಷದ ಕುಣಿತದ ರೀತಿಗೆ ಎಂಥವರಾದರೂ ಒಮ್ಮೆ ಇಲ್ಲಿ ತಲೆದೂಗಲೇಬೇಕು. ಇದೀಗ ಶರನ್ನವರಾತ್ರಿಯ ಕಡೆಯ ಎರಡು ದಿನಗಳು ಬಾಕಿ ಉಳಿದಿದ್ದು ಬೇರೆ ಬೇರೆ ತಂಡದ ಹುಲಿವೇಷಧಾರಿಗಳು ಪೇಟೆ ಬೀದಿಗಳತ್ತ ಕಾಲಿಟ್ಟಿದ್ದಾರೆ. ಬೀದಿ ಬೀದಿಗಳಲ್ಲಿ ಪಯಣ ಬೆಳೆಸಿರುವ ಹುಲಿಗಳು ಅಬ್ಬರದ ಕುಣಿತದೊಂದಿಗೆ ನವರಾತ್ರಿಗೆ ರಂಗು ನೀಡುತ್ತಿದೆ.