ಬೆಂಗಳೂರು, ಜು 23 : 50 ಸಾವಿರದಿಂದ 1 ಲಕ್ಷದವರೆಗೂ ಡೊನೇಶನ್ ಕೊಟ್ಟು ಖಾಸಗಿ ಶಾಲೆಗೆ ಸೇರುವ ಮಕ್ಕಳಿಗೆ ಹಣ ನೀಡಿ ಬಸ್ ನಲ್ಲಿ ಪ್ರಯಾಣಿಸುವುದು ದೊಡ್ಡ ವಿಚಾರವಲ್ಲ. ಹೀಗಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಉಚಿತ ಬಸ್ಪಾಸ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರದಲ್ಲಿ ಸೋಮವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಉಚಿತ ಬಸ್ಪಾಸ್ ನೀಡಲಾಗುತ್ತದೆ, ಲಕ್ಷ ರೂಪಾಯಿ ಸುರಿದು ಖಾಸಗಿ ಶಾಲೆ ಸೇರುವ ಮಕ್ಕಳಿಗೆ ಬಸ್ ದುಡ್ಡು ಕೊಡಲು ಕಷ್ಟವಾಗುವುದಿಲ್ಲ. ಇಂತಹ ಮಕ್ಕಳಿಗೆ ಉಚಿತ ಬಸ್ ಪಾಸ್ ಅಗತ್ಯವಿಲ್ಲ. ಬಿಜೆಪಿಯವರು ಎಬಿವಿಪಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಬೇಡ. ಮನಸ್ಸು ಮಾಡಿದರೆ ನನಗೂ ಅವರಿಗಿಂತ ಚೆನ್ನಾಗಿ ರಾಜಕೀಯ ಮಾಡಲು ಬರುತ್ತದೆ ಎಂದಿದ್ದಾರೆ. ಮಂಗಳವಾರ ಬಸ್ ಪಾಸ್ ವಿಚಾರವಾಗಿ ಅಂತಿಮ ನಿರ್ಧಾರ ತಳೆಯುವುದಾಗಿ ಇದೇ ವೇಳೆ ತಿಳಿಸಿದ್ದಾರೆ.