ವರದಿ: ಸ್ಟೀಫನ್ ಕಾಸರಗೋಡು
ಉಪ್ಪಳ, ಜು 23: ಯಾವುದೇ ಅಪಘಾತ, ದುರಂತ ಸಂಭವಿಸುವಾಗ ಜನರು ನಂಬಿರುವುದು ಅಗ್ನಿಶಾಮಕ ದಳವನ್ನು. ಅನಾಹುತ ನಡೆದ ಸ್ಥಳಕ್ಕೆ ತುರ್ತಾಗಿ ತಲುಪಿ ತಮ್ಮ ಜೀವ ಪಣಕ್ಕಿಟ್ಟು ರಕ್ಷಣೆಯಲ್ಲಿ ತೊಡಗುತ್ತಾರೆ . ಆದರೆ ಉಪ್ಪಳದಲ್ಲಿರುವ ಅಗ್ನಿಶಾಮಕ ದಳ ಘಟಕದ ಸ್ಥಿತಿಯೇ ಬೇರೆ . ಒಂದೆಡೆ ಅಗ್ನಿಶಾಮಕ ಘಟಕವೇ ಸಮಸ್ಯೆಗಳ ಅಗಾರವಾಗಿದ್ದು, ಇನ್ನೊಂದೆಡೆ ತುರ್ತು ಕಾರ್ಯಾಚರಣೆಗೆ ವಾಹನ, ಸೌಲಭ್ಯ ಗಳು, ಅಗತ್ಯ ಸಿಬ್ಬಂದಿಗಳಿಲ್ಲ.
ಎಂಟು ವರ್ಷಗಳ ಹಿಂದೆ ಆರಂಭಗೊಂಡ ಉಪ್ಪಳ ಅಗ್ನಿಶಾಮಕ ದಳ ಘಟಕದ ಪರಿಸ್ಥಿಯನ್ನು ಕೇಳುವವರಿಲ್ಲದಂತಾಗಿದೆ. ಉಪ್ಪಳ ನಯಾಬಜಾರ್ ನಿಂದ ಒಂದೂವರೆ ಕಿ. ಮೀ ಒಳಪ್ರದೇಶದಲ್ಲಿ ಹಳೆಯ ಕಟ್ಟಡ ವೊಂದರಲ್ಲಿ 2010ರಲ್ಲಿ ಘಟಕ ಆರಂಭಗೊಂಡಿತ್ತು. ಹೊಸ ಕಟ್ಟಡ ನಿರ್ಮಾಣವಾಗುವವರೆಗೆ ತಾತ್ಕಾಲಿಕವಾಗಿ ಈ ಕಟ್ಟಡದಲ್ಲಿ ಘಟಕ ಆರಂಭಿಸಿರುವುದಾಗಿ ಸರಕಾರ ತಿಳಿಸಿತ್ತು,
ಆದರೆ ಎಂಟು ವರ್ಷ ಕಳೆದರೂ ಸ್ಥಿತಿ ಮಾತ್ರ ಕೊಂಚವೂ ಬದಲಾಗಿಲ್ಲ .
ಅಗ್ನಿಶಾಮಕ ಸಿಬಂದಿಗಳಿಗೆ ಸೂಕ್ತ ಕಚೇರಿ ವ್ಯವಸ್ಥೆ ಇಲ್ಲ, ವಾಸ್ತವ್ಯಕ್ಕೆ ಸ್ಥಳಾವಕಾಶ ಇಲ್ಲ . ಹಳೆಯ ಗೋ ಸಾಕಣೆ ಕೇಂದ್ರವನ್ನು ದುರಸ್ತಿಗೊಳಿಸಿ ಸಿಬ್ಬಂದಿಗಳಿಗೆ ನೀಡಲಾಗಿದೆ. ಆದರೆ ಇದು ಹೇಗಿದೆ ಎಂದರೆ ವಿಶ್ರಾಂತಿ ಪಡೆಯಲಾಗಲಿ , ತಮ್ಮ ವಸ್ತುಗಳನ್ನು ಭದ್ರವಾಗಿ ಇಡುವ ವ್ಯವಸ್ಥೆಯಾಗಲಿ ಇಲ್ಲ . ಆಹಾರ ತಯಾರಿಸಲು ಅಡುಗೆ ಕೋಣೆಯೂ ಇಲ್ಲ . ಹೊರಗಡೆ ಇರುವ ಟ್ಯಾಂಕ್ ನ ಶೆಡ್ ಬಳಿ ಅಡುಗೆ ತಯಾರಿಸಬೇಕಾದ ದುಸ್ಥಿತಿ. ಸೂಕ್ತ ಶೌಚಾಲಯ ವ್ಯವಸ್ಥೆ ಮೊದಲೇ ಇಲ್ಲ .
ಇದು ಸಿಬ್ಬಂದಿಗಳು ಎದುರಿಸುತ್ತಿರುವ ದಿನನಿತ್ಯದ ಸಮಸ್ಯೆಯಾದರೆ, ಅಗ್ನಿಶಾಮಕ ದಳದ ವಾಹನಗಳನ್ನು ನಿಲುಗಡೆಗೊಳಿಸಲು ಸ್ಥಳಾವಕಾಶ ಇಲ್ಲದಾಗಿದೆ. ತಾತ್ಕಲಿಕವಾಗಿ ಹೊರಗಡೆ ಸೀಟು ಹಾಸಿದ ಚಪ್ಪರದಲ್ಲಿ ವಾಹನ ನಿಲುಗಡೆ ಗೊಳಿಸಲಾಗುತ್ತಿದೆ .
ಉಪ್ಪಳ ಘಟಕದಲ್ಲಿ ಕನಿಷ್ಠ 24 ಸಿಬಂದಿಗಳು, ಐದರಿಂದ ಆರು ಅಗ್ನಿಶಾಮಕ ದಳದ ವಾಹನ ಅಗತ್ಯ . ಆದರೆ ಈಗ ಇರುವುದು ಏಳು ಸಿಬ್ಬಂದಿಗಳು ಹಾಗೂ ಎರಡು ವಾಹನಗಳು . ದುರಂತ ನಡೆದಾಗ ಒಂದು ಸ್ಥಳದಿಂದ ಒಂದು ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ . ಬೇಸಿಗೆ ಕಾಲದಲ್ಲಿ ಬೆಂಕಿ ಅವಘಡಗಳು , ಮಳೆಗಾಲದಲ್ಲಿ ನೀರುಪಾಲಾಗುವ , ನೆರೆ , ಮರಗಳು ಉರುಳಿ ಬೀಳುವ
ಹಾಗೂ ಇನ್ನಿತರ ಘಟನೆಗಳು ಸರಣಿಯಾಗಿ ನಡೆದಾಗ ಸಿಬಂದಿಗಳು ಎಡೆಬಿಡದೆ ಓಟಾಟ ನಡೆಸಬೇಕಿದ್ದು , ಹಲವೆಡೆ ಸೂಕ್ತ ಸಮಯಕ್ಕೆ ತಲುಪಲಾಗದೆ ರಕ್ಷಣಾ ಕಾರ್ಯ ವಿಳಂಬ ಗೊಳ್ಳುತ್ತಿದೆ . ಇದು ಮಾತ್ರವಲ್ಲ ತೀರ ಪ್ರದೇಶವಾದುದರಿಂದ ಸಮುದ್ರ ದುರಂತಗಳು ನಡೆದಾಗ ರಕ್ಷಣೆಗೆ ಯಾವುದೇ ಉಪಕರಣಗಳು ಇವರ ಬಳಿ ಇಲ್ಲ. ದೂರದ ಕಾಸರಗೋಡು ಅಗ್ನಿಶಾಮಕ ಘಟಕದ ನೆರವು ಪಡೆಯಬೇಕಿದೆ . ಇದರಿಂದ ಸಿಬ್ಬಂದಿಗಳನ್ನು ಅಸಹಾಯಕರಾಗುವಂತೆ ಮಾಡುತ್ತಿದೆ.
ಉಪ್ಪಳ ಅಗ್ನಿಶಾಮಕ ದಳದ ಘಟಕ ನಿರ್ಮಾಣಕ್ಕೆ ಸೋಂಕಾಲು ಎಂಬಲ್ಲಿ ಸ್ಥಳ ಗುರುತಿಸಿ, ಅನುದಾನವನ್ನು ಮೀಸಲಿಡಲಾಗಿದೆ. ಆದರೆ ವರ್ಷಗಳು ಕಳೆದರೂ ಹಲವು ತಾಂತ್ರಿಕ ಹಾಗೂ ಸ್ಥಳೀಯರ ವಿರೋಧದ ನಡುವೆ ಕಡತದಲ್ಲೇ ಉಳಿದುಕೊಂಡಿದೆ. ಉಪ್ಪಳ ಪರಿಸರದಲ್ಲಿ ಸಾಕಷ್ಟು ಸ್ಥಳಾವಕಾಶ ಇದ್ದರೂ ಸರಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸಿಲ್ಲ .
ಮಂಜೇಶ್ವರ ತಾಲೂಕು ವ್ಯಾಪ್ತಿಗೆ ಉಪ್ಪಳ ಅಗ್ನಿಶಾಮಕ ಘಟಕ ಕಾರ್ಯ ನಿರ್ವಹಿಸಬೇಕಿದ್ದು , ಮೂಲಭೂತ ಸೌಲಭ್ಯ , ಅಗತ್ಯ ವಾಹನ ,ಸೂಕ್ತ ಕಟ್ಟಡ ಮೊದಲಾದವುಗಳಿಲ್ಲದೆ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ.