ಉಡುಪಿ, ಜು 23: ಪಟ್ಟದ ದೇವರನ್ನು ತಮಗೆ ವಾಪಸ್ ನೀಡುತ್ತಿಲ್ಲ ಎಂದು ಆರೋಪಿಸಿ ಶಿರೂರು ಲಕ್ಷ್ಮೀವರ ತೀರ್ಥರು ಸಲ್ಲಿಸಿದ್ದ ಕೇವಿಯಟ್ ಅನೂರ್ಜಿತವಾಗಲಿದೆ. ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಯ ಸಾವಿನ ಹಿನ್ನಲೆಯಲ್ಲಿ ಕೇವಿಯಟ್ ಅನೂರ್ಜಿತಗೊಂಡಿದೆ.
ವಿಧಾನಸ್ಭಾ ಚುನವಣೆಯ ಸಂದರ್ಭ ಅನಾರೋಗ್ಯಕ್ಕೆ ತುತ್ತಾಗಿದ್ದ ಲಕ್ಷ್ಮೀವರ ತೀರ್ಥರು, ನಿತ್ಯವೂ ಪೂಜೆ ನಡೆಸಲು ಸಾಧ್ಯವಾಗದ ಕಾರಣಕ್ಕೆ ಮಠದ ಪಟ್ಟದ ದೇವರು ವಿಠ್ಠಲ ಮೂರ್ತಿ ಹಾಗೂ ಇನ್ನಿತರೆ ವಿಗ್ರಹಗಳನ್ನು ಉಡುಪಿಯ ಕೃಷ್ಣ ದೇವಸ್ಥಾನಕ್ಕೆ ಒಪ್ಪಿಸಿದ್ದರು.ಆದರೆ ಬಳಿಕ ಪಟ್ಟದ ದೇವರನ್ನು ತಮಗೆ ವಾಪಸ್ ನೀಡದ ಕಾರಣ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಕೇವಿಯಟ್ಗೆ 90 ದಿನಗಳ ಕಾಲಾವಕಾಶ ಇದ್ದು, ಕೇವಿಯಟ್ ಅವಧಿ ಮುಗಿಯುವವರೆಗೂ ಶ್ರೀಗಳ ವಿರುದ್ಧ ಯಾರೂ ಮಾತನಾಡಬಾರದು, ಮತ್ತು ಶಿಷ್ಯ ಸ್ವೀಕಾರಕ್ಕಾಗಿ ಯಾರೂ ಒತ್ತಾಯಿಸುವಂತಿಲ್ಲ ಎಂದು ಸೂಚನೆಯಿತ್ತು.ಆದರೆ ಅವರ ನಿಧನದಿಂದಾಗಿ ಇದೀಗ ಕೇವಿಯಟ್ ಅನೂರ್ಜಿತವಾಗಿದೆ. ಇನ್ನೊಂದೆಡೆ ಪಟ್ಟದ ದೇವರನ್ನು ಹಿಂತಿರುಗಿಸದಿದ್ದರೆ ಪುತ್ತಿಗೆ ಮಠವನ್ನು ಹೊರತುಪಡಿಸಿ ಉಳಿದ ಆರು ಮಠದ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲು ಶೀರೂರು ಶ್ರೀ ಲಕ್ಷ್ಮೀವರ ತೀರ್ಥರು ಮುಂದಾಗಿದ್ದರು. ಇದೇ ಹಿನ್ನಲೆಯಲ್ಲಿಯೂ ಜು 18 ರ ಬುಧವಾರ ವಕೀಲ ರವಿಕಿರಣ ಮುರ್ಡೇಶ್ವರ್ ಅವರನ್ನು ಮಠಕ್ಕೆ ಬರುವಂತೆ ಸೂಚಿಸಿದ್ದರು. ಆದರೆ ಅಂದೇ ಅನಾರೋಗ್ಯದಿಂದಾಗಿ ಆಸ್ಪತ್ರೆ ಸೇರಿ ಶ್ರೀಗಳು ಗುರುವಾರ ವಿಧಿವಶರಾಗಿದ್ದರು.