ಮಂಗಳೂರು, ಜು 23 : ಒಬ್ಬಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯ ಮನೆಗೆ ನುಗ್ಗಿದ ಮೂವರು ಮುಸುಕುಧಾರಿಗಳು ಮಹಿಳೆಗೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಗರದ ವೆಲೆನ್ಸಿಯಾದಲ್ಲಿ ಭಾನುವಾರ ರಾತ್ರಿ ನಡೆದಿದೆ. ಗಾಯಗೊಂಡ ಮಹಿಳೆಯನ್ನು ಸಿಲ್ವಿಯಾ ಸಲ್ಡಾನಾ (49) ಎಂದು ಗುರುತಿಸಲಾಗಿದೆ.
ಸಿಲ್ವಿಯಾ ಅವರು ವಿಧವೆಯಾಗಿದ್ದು ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದು, ಆಸ್ತಿ ವಿಚಾರವಾಗಿ ಮನೆಯ ಸಮೀಪದಲ್ಲಿರುವ ಕುಟುಂಬದೊಂದಿಗೆ ಮನಸ್ತಾಪ ಹೊಂದಿದ್ದರು. ಇದೇ ವಿಚಾರವಾಗಿ ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದರು. ಎರಡು ದಿನಗಳ ಹಿಂದೆ ಇದೇ ವಿಚಾರವಾಗಿ ಜೊಯೆಲ್ ಎಂಬಾತ ಸಂತೋಷ್ ಮತ್ತು ಮಧುಕರ್ ಎಂಬವರೊಂದಿಗೆ ಬಂದು ನ್ಯಾಯಾಲಯದಿಂದ ಕೇಸ್ ವಾಪಾಸ್ ತೆಗೆದುಕೊಳ್ಳುವಂತೆ ಸಿಲ್ವಿಯಾ ಅವರಿಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಗಾಯಗೊಂಡಿರುವ ಸಿಲ್ವಿಯಾ ಸಲ್ಡಾನಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆಗೆ ಸಂಬಂಧಪಟ್ಟಂತೆ ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.