ಮಂಗಳೂರು, ಜು 23: ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲವತಿಯಿಂದ ಜು 22 ರ ಭಾನುವಾರ ನಗರದ ಗಾಂಧಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ದಂತ ಹಾಗೂ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿತ್ತು. ಶಾಸಕ ವೇದವ್ಯಾಸ ಕಾಮತ್ ಶಿಬಿರ ಉದ್ಘಾಟಿಸಿ ಬಿರುವೆರ್ ಕುಡ್ಲ ಬಡ ಬಗ್ಗರ ಸೇವೆಯಲ್ಲಿ ತೊಡಗಿ ಇಂದು ಲಕ್ಷ ಲಕ್ಷ ರೂಪಾಯಿಗಳನ್ನು ಸಹಾಯಾರ್ಥವಾಗಿ ಹಂಚುತ್ತಿದೆ. ದೊಡ್ಡ ಮೊತ್ತದ ಹಣವನ್ನು ರಾಜ್ಯದಲ್ಲಿ ಪ್ರಥಮ ಸಂಘಟನೆಯಾಗಿ ಬಿರುವೆರ್ ಕುಡ್ಲ ಮಾತ್ರ ನೀಡುತ್ತಿದೆ. ಸಮುದಾಯ, ಜಾತಿ ರಹಿತವಾಗಿ ಸಂಘಟನೆಗಳು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಾಗ ಸರಕಾರ ಮಾಡುವ ಕೆಲಸವನ್ನು ಹೇಗೆ ಮಾಡ ಬಹುದು ಎಂಬುದಕ್ಕೆ ಬಿರುವೆರ್ ಕುಡ್ಲ ನಿದರ್ಶನವಾಗಿದೆ ಎಂದರು.ಸಾಂಸ್ಕೃತಿಕ ಭಾಗವಾಗಿ ಹುಲಿ ವೇಷ ಕುಣಿತವನ್ನು ಪ್ರಸಿದ್ದಿಗೊಳಿಸಿದ ಕೀರ್ತಿಯೂ ಈ ಸಂಘಟನೆಗೆ ಸಲ್ಲುತ್ತದೆ ಎಂದರು.
ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್ ಮಾತನಾಡಿ ಬಿರುವೆರ್ ಕುಡ್ಲ ಸಂಘಟನೆ ಮಾದರಿಯಾಗಿ ಇಂದು ವೈದ್ಯಕೀಯ ಶಿಬಿರ ಆಯೋಜಿಸಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದು ಆರೋಗ್ಯದ ಬಗ್ಗೆ ಸದಾ ಜಾಗೃತರಾಗಿ ಇರುವುದಕ್ಕೆ ಸಹಕಾರಿಯಾಗಲಿ ಎಂದರು. ಬಿರುವೆರ್ ಕುಡ್ಲ ಯುವ ಸಮೂಹವನ್ನು ಒಳಗೊಂಡ ಹುರುಪಿನ ಸಂಘಟನೆಯಾಗಿದ್ದು ವೈದ್ಯಕೀಯ ಚಿಕಿತ್ಸೆಗೆ ನೆರವು, ಮದುವೆ, ಅಂಗವಿಕಲರಿಗೆ ಗಾಲಿ ಖುರ್ಚಿ, ವಿದ್ಯಾ ಪ್ರೋತ್ಸಾಹ ನಿಧಿ ಮತ್ತಿತರ ಯೋಜನೆಗಳನ್ನು ರೂಪಿಸುತ್ತಾ ಈವರೆಗೆ ಹಂಚಿದ ಮೊತ್ತ ಕೋಟಿ ಸಮೀಪಿಸುತ್ತಿದೆ. ಯುವಕರು ದುಡಿದ ವೇತನದಲ್ಲಿ ಒಂದು ಪಾಲು, ದಾನಿಗಳ ಸಹಕಾರದಿಂದ ಈ ಯೋಜನೆ ಯಶಸ್ವಿಯಾಗಿ ನಡೆಸುತ್ತಾ ಬಂದಿದೆ ಎಂದರು.
ಪತ್ರಕರ್ತ ಪ್ರಕಾಶ್ ಪಾಂಡೇಶ್ವರ್ ,ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ಬಳ್ಳಾಲ್ ಬಾಗ್, ಅಧ್ಯಕ್ಷ ರಾಕೇಶ್ ಬಳ್ಳಾಲ್ ಬಾಗ್, ಮುಖಂಡ ಅಭಿಷೇಕ್ ಅಮೀನ್, ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಕೇಶ್, ಯೆನಪೋಯ ಸಮುದಾಯ ದಂತ ವೈದ್ಯ ವಿಭಾಗದ ಡಾ.ರೇಖಾ ಪಿ.ಶೆಣೈ, ಮೆಡಿಕಲ್ ಅಧಿಕಾರಿ ಡಾ.ದರ್ಶನ್ , ದಂತ ವೈದ್ಯಕೀಯ ವಿಭಾಗದ ಪಿಆರ್ಒ ಡಾ.ಭರತ್ ,ಡಾ.ಶ್ವೇತ ಆಶಿತ್ , ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಸಂತ ಜೆ.ಪೂಜಾರಿ, ಬಿರುವೆರ್ ಕುಡ್ಲ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು. ರಾಕೇಶ್ ಕಾರ್ಯಕ್ರಮ ನಿರೂಪಿಸಿದರು