ಬೆಂಗಳೂರು, ಜು21: ಪ್ರಧಾನಿ ನರೇಂದ್ರ ಮೋದಿ ಅವರಂಥ ನಾಟಕಕಾರನನ್ನು ನಾನು ನೋಡಿಯೇ ಇಲ್ಲ. ಅವರ ಮಾತುಗಳಿಂದ ಜನರನ್ನು ಹೆಚ್ಚು ದಿನ ಮರಳು ಮಾಡಲು ಸಾಧ್ಯವಿಲ್ಲ. ಜನರಿಗೆ ಬೇಕಾಗಿರುವುದು ಕಾಮ್ ಕೀ ಬಾತ್. ಮನ್ ಕೀ ಬಾತ್ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿಯವರು ಮಾಡಿದ ಅಪಪ್ರಚಾರದಿಂದ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಸೋಲಾಯಿತು. ಶೇಕಡಾವಾರು ಮತಗಳಿಕೆಯಲ್ಲಿ ಬಿಜೆಪಿಗಿಂತ ಮುಂದೆ ಇದ್ದೇವೆ. ಆದರೂ ಹೆಚ್ಚು ಸ್ಥಾನಗಳನ್ನು ಗಳಿಸಲು ಆಗಿಲ್ಲ. ಮುಂಬರುವ ಲೋಕಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ಆಗಬೇಕು. ಆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ ಆಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿಗೆ ಒಂದು ಸಿದ್ಧಾಂತವೇ ಇಲ್ಲ. ಕೇವಲ ಭಾವನಾತ್ಮಕ ವಿಚಾರಗಳನ್ನು ದೊಡ್ಡದಾಗಿ ಬಿಂಬಿಸಿ ಆ ಮೂಲಕ ಗಲಭೆ ಸೃಷ್ಟಿ ಮಾಡುವುದೇ ಅದರ ಕೆಲಸ. ವಿಧಾನಸಭೆ ಚುನಾವಣೆ ಸೋಲಿನಿಂದ ಧೃತಿಗೆಡಬೇಡಿ. ರೀಚಾರ್ಜ್ ಆಗುವ ಮೂಲಕ ಲೋಕಸಭೆ ಚುನಾವಣೆಗೆ ಸನ್ನದ್ಧರಾಗಿ ಎಂದು ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಿಜೆಪಿಯವರು ಹಿಂದುತ್ವದ ಬಗ್ಗೆ ಹೆಚ್ಚು ಪ್ರಚಾರ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ವೈಫಲ್ಯಗಳನ್ನು ಪಟ್ಟಿ ಮಾಡಿ ಹೇಳಿದರೂ ಪ್ರಯೋಜನವಾಗಲಿಲ್ಲ. ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಇಲ್ಲಿಗೆ ಬಂದು ನಮ್ಮ ಸರಕಾರವನ್ನು ಪರ್ಸಂಟೇಜ್ ಸರಕಾರ ಎಂದು ಟೀಕಿಸಿದರು. ಒಟ್ಟಾರೆ ಬಿಜೆಪಿ ಸಮಾಜಕ್ಕೆ ಶಾಪ. ಲೋಕಸಭೆ ಚುನಾವಣೆಯಲ್ಲಿ ಆ ಪಕ್ಷವನ್ನು ಸೋಲಿಸುವುದೇ ನಮ್ಮ ಗುರಿಯಾಗಬೇಕು ಎಂದರು.
ರೈತರ ವಿಚಾರದಲ್ಲಿ ಹಲವು ಬಾರಿ ಬರೆದ ಪತ್ರಗಳಿಗೆ ಪ್ರಧಾನಿಯವರಿಂದ ಉತ್ತರವೇ ಬರಲಿಲ್ಲ. ಕೇಂದ್ರ ಸರಕಾರದಿಂದ ಕಳೆದ ಐದು ವರ್ಷದಲ್ಲಿ ರಾಜ್ಯದ ರೈತರಿಗೆ ಆಗಿರುವ ಅನ್ಯಾಯ ಅಷ್ಟಿಷ್ಟಲ್ಲ ಎಂದು ಕೇಂದ್ರ ಸರಕಾರವನ್ನು ಟೀಕಿಸಿದರು.