ಮಂಗಳೂರು, ಜು21: ಕಣ್ಮುಂದೆ ಅವ್ಯಾಹತವಾಗಿ ಗೋಹತ್ಯೆ, ಗೋದರೋಡೆ, ಗೋಕಳ್ಳರ ಅಟ್ಟಹಾಸ ನಡೆಯುತ್ತಿದ್ದರೂ ಪೊಲೀಸ್ ಮತ್ತು ಆಡಳಿತ ವ್ಯವಸ್ಥೆ ಕಣ್ಮುಚ್ಚಿ ಕುಳಿತಿದೆ ಎಂದು ಜಗದೀಶ್ ಶೇಣವ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪೊಲೀಸರು ಉದ್ದೇಶಪೂರ್ವಕವಾಗಿ ಗೋವನ್ನು ಕಳವು ಮಾಡುವ ಅಪರಾಧಿಗಳನ್ನು ಬಂಧಿಸದೆ, ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮಾತ್ರವಲ್ಲ, ಸರ್ಕಾರದ ಈ ಕ್ರಮವನ್ನು ಭಾರತೀಯ ಗೋಪರಿವಾರ ಖಂಡಿಸುತ್ತದೆ ಎಂದು ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಗೋವುಗಳ ಕಳ್ಳತನ ವಿರುದ್ಧ ನಾವೇ ಹೋರಾಡುತ್ತೇವೆ. ಗೋಶಾಲೆಯ ಕಾರ್ಯಕರ್ತರನ್ನು ಹೆದರಿಸಿ, ಬೆದರಿಸಿ, ಹಲ್ಲೆ ಮಾಡಿ ಗೋವುಗಳನ್ನು ದರೋಡೆ ಮಾಡುವ ಗೋಕಳ್ಳರ ವಿರುದ್ಧ ಆಡಳಿತ ವ್ಯವಸ್ಥೆ ಇದುವರೆಗೆ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ನಾವೇ ಈ ವಿರುದ್ಧ ಕಾರ್ಯಾಚರಣೆ ನಡೆಸುತ್ತೇವೆ. ನಮಗೆ ಯಾವುದೇ ಅಧಿಕಾರಿಗಳ, ಪೊಲೀಸರ ನೆರವು ಬೇಕಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ನಗರದ ಮೂಡುಶೆಡ್ಡೆಯಲ್ಲಿ ಪುರುಷೋತ್ತಮ್ ಎಂಬವರ ಮನೆಯ ಸಾಕು ನಾಯಿಯನ್ನು ಕೊಂದು ಮನೆಯವರಿಗೆ ತಲವಾರು ತೋರಿಸಿ ದನ ಕಳ್ಳತನ ಮಾಡಿದ್ದಾರೆ. ಮಾತ್ರವಲ್ಲ, ಪೊಲೀಸರಿಗೆ ತಿಳಿಸಿದರೆ ನಾಳೆ ನಿಮ್ಮ ಗತಿಯು ಹೀಗೆ ಎಂದು ಬೆದರಿಸಿದ್ದಾರೆ. ನಂತರ ಹಟ್ಟಿಯಲ್ಲಿದ್ದ 2 ದನಗಳನ್ನು ಕದ್ದೊಯ್ದಿದ್ದಾರೆ. ಇದೇ ರೀತಿ ಕಳೆದ ಒಂದು ತಿಂಗಳಿನಲ್ಲಿ ಮೂಡುಶೆಡ್ಡೆ ಪರಿಸರದಲ್ಲಿ ಸುಮಾರು 21ಕ್ಕೂ ಹೆಚ್ಚು ದನ ಕಳವಾಗಿದೆ. ಆದರೆ ಗೋಕಳ್ಳರ ವಿರುದ್ಧ ಆಡಳಿತ ವ್ಯವಸ್ಥೆ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಉಳ್ಳಾಲ, ಅತ್ತಾವರ ಸೇರಿದಂತೆ ಜಿಲ್ಲೆಯ ಅನೇಕ ಕಡೆ ಗೋಕಳ್ಳರು ಅಟ್ಟಹಾಸ ಮೆರೆದಿದ್ದಾರೆ. ಉಳ್ಳಾಲ ನಿವಾಸಿ ಲಕ್ಷ್ಮೀ ಎಂಬವರ ಮನೆಯಲ್ಲಿ ಕಳೆದ 8 ವರುಷಗಳಿಂದ 15 ದನಗಳ ಕಳವು ಆಗಿದೆ. ಮಾತ್ರವಲ್ಲ, ಮನೆಯವರ ಕಣ್ಮುಂದೆಯೇ ಕಸಾಯಿಖಾನೆಯಲ್ಲಿ ಅವ್ಯಾಹತವಾಗಿ ಗೋಹತ್ಯೆ ನಡೆಸಿದ್ದಾರೆ. ಆದರೆ ಇದನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 20 ಜನರ ತಂಡ ಗೋಕಳ್ಳರ ವಿರುದ್ಧ ಹೋರಾಡಲು ಸಿದ್ಧತೆ ನಡೆಸುತ್ತಿದೆ. ಅವ್ಯಾಹತವಾಗಿ ನಡೆಯುತ್ತಿರುವ ಗೋವುಗಳ ಕಳ್ಳತನ ವಿರುದ್ಧ ನಾವೇ ಹೋರಾಡುತ್ತೇವೆ. ಇದರಿಂದ ಯಾವುದೇ ತೊಂದರೆಗಳು ನಡೆದರೆ ನಾವು ಹೊಣೆಗಾರರಲ್ಲ. ಪೊಲೀಸ್ ಇಲಾಖೆ ವಿಫಲವಾಗಿರುವುದರಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದರು.