ಬಂಟ್ವಾಳ, ಜು 20: ನಿನ್ನೆ ರಾತ್ರಿಯಿಂದ ಕರಾವಳಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಭಾರೀ ಮಳೆಗೆ ಗುಡ್ಡ ಜರಿದು ಕೃಷಿಗೆ ಹಾನಿಯಾದ ಘಟನೆ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಮುಂಡಾಜೆ ಎಂಬಲ್ಲಿ ನಡೆದಿದೆ. ಭಾರೀ ಮಳೆಗೆ ಗುಡ್ಡ ಕುಸಿತಗೊಂಡು ನೀರು ಹರಿದು ಹೋಗುವ ತೋಡಿಗೆ ಮಣ್ಣು ಬಿದ್ದ ಪರಿಣಾಮ ನೀರು ಹರಿದು ಹೋಗಲು ಜಾಗವಿಲ್ಲದೆ ಸಮೀಪದಲ್ಲೇ ಇದ್ದ ಭತ್ತದ ಕೃಷಿ ಭೂಮಿಗೆ ಮತ್ತು ಅಡಿಕೆ ಕೃಷಿಗೆ ನೀರು ನುಗ್ಗಿ ಸಾವಿರಾರು ರೂ ನಷ್ಟ ಸಂಭವಿಸಿದೆ.
ಭಾರೀ ಮಳೆಗೆ ಕುಸಿತಗೊಂಡಿರುವ ಗುಡ್ಡ
ಮಳೆಗೆ ಕುಸಿತಗೊಂಡ ಮನೆ
ಘಟನೆ ಬಗ್ಗೆ ಮಾಹಿತಿ ಪಡೆದ ಊರಿನ ಯುವಕರು ಘಟನಾ ಸ್ಥಳಕ್ಕೆ ಆಗಮಿಸಿ ಶ್ರಮದಾನದ ಮೂಲಕ ತಾತ್ಕಾಲಿಕವಾಗಿ ಸಮಸ್ಯೆ ಪರಿಹರಿಸಲು ಸಹಕರಿಸಿದ್ದಾರೆ. ಇನ್ನು ತಾಲೂಕಿನ ಭಂಡಾರಿಬೆಟ್ಟು ಎಂಬಲ್ಲಿ ಮನೆಯೊಂದು ಸಂಪೂರ್ಣ ಕುಸಿದು ಬಿದ್ದ ಪರಿಣಾಮ ಸುಮಾರು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಇದರ ಸಮೀಪದ ಮನೆಯೊಂದರ ಗೋಡೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಶಿವನಂದ ನಾಟೆಕಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.