ಮಂಗಳೂರು, ಜು20: ಎ. ಎಸ್. ಪ್ರಶಾಂತ್ ನಿರ್ದೇಶನದ ಮತ್ತೊಂದು ಹಾಸ್ಯ ಪ್ರಧಾನ ತುಳು ಚಿತ್ರ 'ದಗಲ್ ಬಾಜಿಲು' ಕರಾವಳಿಯಾದ್ಯಂತ ಬಿಡುಗಡೆಗೊಂಡಿದ್ದು, ಪ್ರೇಕ್ಷಕರ ಮನಗೆದ್ದಿದೆ.
ಅನುಗ್ರಹ ಫಿಲಂಸ್ ಲಾಂಛನದಲ್ಲಿ ಕುಂಬ್ಳೆ ಸಂತೋಷ್ ಶೆಟ್ಟಿ ಮತ್ತು ಸ್ನೇಹಿತರು ಈ ಚಿತ್ರವನ್ನು ನಿರ್ಮಿಸಿದ್ದಾರೆ. 'ದಗಲ್ ಬಾಜಿಲು' ಚಿತ್ರದ ಕಥೆ, ಸಾಹಿತ್ಯ ಬರೆದು ವಿಭಿನ್ನ ಪಾತ್ರದಲ್ಲಿ ಸುರೇಶ್ ಅಂಚನ್ ಮೂಡಬಿದರೆ ಅಭಿನಯಿಸಿದ್ದಾರೆ. ಕೆ ಜಗದೀಶ್ ರೆಡ್ಡಿ ಚಿತ್ರಕ್ಕೆ ಸಹ ನಿರ್ದೇಶನವನ್ನು ಮಾಡಿದ್ದು, ಚಿತ್ರಕ್ಕೆ ಕೆ.ಎಮ್.ವಿಷ್ಣುವರ್ಧನ್ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ.
ತುಳುನಾಡಿನ ಎಲ್ಲಾ ಚಿತ್ರಮಂದಿರಗಳಲ್ಲಿ 'ದಗಲ್ ಬಾಜಿಲು' ಬಿಡುಗಡೆಗೊಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಪೂರ್ಣ ಹಾಸ್ಯದ ಜೊತೆಗೆ ಪ್ರೀತಿ, ಸಂಬಂಧ, ದಗಲ್ ಬಾಜಿ ತನಗಳ ಮಿಶ್ರಿತ ಕಥಾಹಂದರ ಇರುವ ಈ ಚಿತ್ರ ತುಳುನಾಡಿನ ಪ್ರೇಕ್ಷಕರಿಗೆ ಮನರಂಜನೆ ನೀಡುವಂತಹ ಚಿತ್ರವಾಗಿದೆ.
ಈ ಚಿತ್ರದಲ್ಲಿ ನಾಯಕ-ನಾಯಕಿಯರಾಗಿ ವಿಘ್ನೇಶ್ , ರಶ್ಮಿಕಾ ನಟಿಸಿದ್ದಾರೆ. ಇವರಿಗೆ ಇದು ಚೊಚ್ಚಲ ಸಿನೆಮಾವಾಗಿದೆ. ಜೊತೆಗೆ ಖ್ಯಾತ ಹಾಸ್ಯ ನಟರಾದ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್ , ಬೋಜರಾಜ್ ವಾಮಂಜೂರು, ದೀಪಕ್ ರೈ, ಸತೀಶ್ ಬಂದಲೆ, ಉಮೇಶ್ ಮಿಜಾರ್ , ತಿಮ್ಮಪ್ಪ ಕುಲಾಲ್, ಸುನೀಲ್ ನೆಲ್ಲಿಗುಡ್ಡೆ, ಪ್ರಕಾಶ್ ತೂಮಿನಾಡ್, ಮನೋಹರ್ ಶಟ್ಟಿ, ಮಣಿ ಕೋಟೆಬಾಗಿಲು, ಚಂದ್ರಶೇಖರ್ ಸಿದ್ದಕಟ್ಟೆ, ವಿಜಯ ಮಯ್ಯ, ಪ್ರಿಯಾ ಹೆಗ್ಡೆ, ನೀಮಾರೇ, ರೂಪಾ ವರ್ಕಾಡಿ, ನಮಿತಾ ಹೀಗೆ ಅನೇಕ ಕಲಾವಿದರು ಚಿತ್ರಕ್ಕೆ ಅದ್ಭುತ ನಟನೆಯ ಮೂಲಕ ಜೀವ ತುಂಬಿದ್ದಾರೆ.
ಸುರೇಶ್ ಅಂಚನ್ ಮೂಡಬಿದರೆ ‘ದಗಲ್ ಬಾಜಿಲು’ ಚಿತ್ರದ ಕಥೆ-ಚಿತ್ರ ಕಥೆ, ಸಂಭಾಷಣೆ-ಸಾಹಿತ್ಯ ಬರೆದಿದ್ದಾರೆ. ಮಾತ್ರವಲ್ಲ, ವಿಭಿನ್ನ ಪಾತ್ರದಲ್ಲಿಯೂ ಅಭಿನಯಿಸಿದ್ದಾರೆ. ವಿಲ್ಫ್ರೆಡ್ ಪಿಂಟೋ ಕಲೆ ಇದೆ. ಕೆ.ಎಮ್. ವಿಷ್ಣುವರ್ಧನ್ ಛಾಯಾಗ್ರಹಣ ಇದೆ. ಇವರು ಈ ಹಿಂದೆ ರಾಜಾಹುಲಿ, ಕಿರಣ್ ಬೇಡಿ , ಲೇಡಿ ಕಮೀಷನರ್ , ನೀರುದೋಸೆ , ರಾಜಸಿಂಹ ಮುಂತಾದ ಚಿತ್ರಗಳಿಗೆ ಉತ್ತಮ ಛಾಯಾಗ್ರಹಣ ಮಾಡಿದ್ದರು. ಮಂಗಳೂರಿನ ಹೆಸರಾಂತ ಗಾಯಕ ಆರ್.ಡಿ ವರ್ಮನ್ ಮತ್ತು ಸಂದೇಶ್ ಬಾಬು ಜೊತೆಗೂಡಿ ಈ ಚಿತ್ರಕ್ಕೆ ಉತ್ತಮ ಸಂಗೀತ ನಿರ್ದೇಶನ ನೀಡಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ಎಸ್.ಪಿ ಚಂದ್ರಕಾಂತ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು ಪ್ರೇಕ್ಷಕರ ಮನಸೂರೆಗೊಳಿಸಿದೆ.