ನವದೆಹಲಿ, ಜು20: ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಚರ್ಚೆ ವೇಳೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರೈತರ ಸಾಲ ಮನ್ನಾ, ಸರ್ಕಾರದ ವಿದೇಶಾಂಗ ನೀತಿ, ಪ್ರತಿ ವ್ಯಕ್ತಿಯ ಖಾತೆಗೆ 15 ಲಕ್ಷ ರೂ. ಜಮೆ, ರಫೆಲ್ ಯುದ್ಧ ವಿಮಾನ ಖರೀದಿ ಸೇರಿದಂತೆ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಎಂದು ಎದುರು ಕುಳಿತಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಿದ ಅವರು, ಉದ್ಯೋಗ ಸೃಷ್ಟಿಯ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಈ ಹಿಂದೆ ಕೇಂದ್ರ ಸರಕಾರ 2 ಕೋಟಿ ಯುವಕರಿಗೆ ಉದ್ಯೋಗ ನೀಡಲಾಗುತ್ತದೆ ಎಂದು ಭರವಸೆ ನೀಡಲಾಗಿತ್ತು. ಕಳೆದ ಒಂದು ವರ್ಷದಲ್ಲಿ ಕೇವಲ 4 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಚೀನಾ 24 ಗಂಟೆಯಲ್ಲಿ 50 ಸಾವಿರ ಉದ್ಯೋಗ ನೀಡಿದೆ. ನಮ್ಮ ಸರ್ಕಾರ 400 ಉದ್ಯೋಗವನ್ನು ಮಾತ್ರ ನೀಡಿದೆ ಎಂದು ವಾಗ್ದಾಳಿ ನಡೆಸಿದರು.
ಉದ್ಯಮಿಗಳ ಸಾವಿರಾರು ಕೋಟಿ ರೂ. ಮೌಲ್ಯದ ಸಾಲವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮನ್ನಾ ಮಾಡಿದ್ದಾರೆ. ಆದರೆ, ರೈತರ ಸಾಲವನ್ನು ಮನ್ನಾ ಮಾಡಲು ಪ್ರಧಾನಿ ಮೋದಿ ಅವರಿಗೆ ಇಚ್ಛಾಶಕ್ತಿ ಇಲ್ಲ ಎಂದು ದೂರಿದ್ದಾರೆ.
ದೇಶದ ಪ್ರತಿ ವ್ಯಕ್ತಿಯ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದ್ದೀರಿ. ಆದರೆ ಉದ್ಯೋಗ ಸೃಷ್ಟಿಯಾಗಲಿಲ್ಲ. ಜನರ ಖಾತೆಗೆ ಹಣವೂ ಬರಲಿಲ್ಲ. ದೇಶದಲ್ಲಿ ತೈಲದ ಬೆಲೆಗಳು ಹೆಚ್ಚಾಗುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಶ್ರೀಮಂತ ಉದ್ಯಮಿಗಳ ಜೇಬು ತುಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜಿಎಸ್ಟಿ, ನೋಟುಗಳ ನಿಷೇಧ ಕುರಿತು ವಿಷಯ ಪ್ರಸ್ತಾಪಿಸಿದ ರಾಹುಲ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಡವರ ಹೃದಯದಲ್ಲಿ ಸ್ಥಾನವಿಲ್ಲ. ಜಿಎಸ್ಟಿ ಜಾರಿಗೆ ತಂದು ಕೋಟ್ಯಾಂತರ ಜನರ ಉದ್ಯೋಗವನ್ನು ನಾಶ ಮಾಡಿದ್ದೀರಿ ಎಂದು ರಾಹುಲ್ ಗಾಂಧಿ ಆರೋಪಿಸಿದರು.