ಉಡುಪಿ, ಜು20: ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಹಠಾತ್ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದು ತನಿಖೆ ಶುರುವಾಗಿದೆ. ಶಿರೂರು ಶ್ರೀಗಳಿಗೆ ಆರೋಗ್ಯ ಸಮಸ್ಯೆ ಇತ್ತಾದರೂ ಸಾಯುವಂತಹ ಕಾಯಿಲೆಗಳು ಇರಲಿಲ್ಲ. ಹೀಗಾಗಿ ಶಿರೂರು ಶ್ರೀ ಸಾವಿನ ಬಗ್ಗೆ ಎದ್ದಿರುವ ಅನುಮಾನಗಳ ಕುರಿತು ಇಂದಿನಿಂದಲೇ ತನಿಖೆ ಪ್ರಾರಂಭವಾಗಲಿದೆ.
ಸ್ವಾಮೀಜಿ ಮೃತಪಟ್ಟ ಬಳಿಕ ಹಿರಿಯಡ್ಕ ಠಾಣೆಯಲ್ಲಿ ಶಿರೂರು ಶ್ರೀ ಸಹೋದರ ಲಾತವ್ಯ ಆಚಾರ್ಯ ಎಂಬುವರು ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ಕೂಡ ನಡೆದಿತ್ತು. ಹೀಗಾಗಿ ಎಫ್ ಐಆರ್ ದಾಖಲಿಸಿರುವ ಪೊಲೀಸರು ಇವತ್ತು ತನಿಖೆ ಪ್ರಾರಂಭಿಸಿದ್ದಾರೆ. ಸ್ವಾಮೀಜಿ ಸಾವಿನ ಬಗ್ಗೆ ಎದ್ದಿರುವ ಅನುಮಾನಗಳ ತನಿಖೆಗಾಗಿ ಜಿಲ್ಲೆಯ ದಕ್ಷ ಅಧಿಕಾರಿಗಳ ತಂಡವನ್ನು ಎಸ್ಪಿ ನಿಂಬರ್ಗಿ ರಚನೆ ಮಾಡಿದ್ದಾರೆ.
ಶಿರೂರು ಸ್ವಾಮೀಜಿಯ ಮರಣೋತ್ತರ ಪರೀಕ್ಷೆಯ ವರದಿ ಇನ್ನಷ್ಟೇ ಬರಲಿದ್ದು, ಪೊಲೀಸರ ತನಿಖೆಗೆ ಇದು ಮಹತ್ವದ ದಿಕ್ಕು ತೋರಿಸಲಿದೆ. ಈಗಾಗಲೇ ಶಿರೂರು ಮೂಲ ಮಠದಲ್ಲಿ ಠಿಕಾಣಿ ಹೂಡಿರುವ ಪೊಲೀಸರ ತಂಡ ಅಲ್ಲಿ ಪರಿಶೀಲನೆ ನಡೆಸುತ್ತಿದೆ. ಮಾತ್ರವಲ್ಲ, ಪೊಲೀಸರು ಮಠದಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದ್ದಾರೆ. ಪ್ರತಿಯೊಂದು ವಸ್ತುಗಳನ್ನು ಪರಿಶೀಲನೆ ನಡೆಸುತ್ತಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.