ಬೆಂಗಳೂರು, ಜು.20: ರಾಜ್ಯ ಮಾತ್ರವಲ್ಲದೆ ರಾಷ್ಟ್ರದಾದ್ಯಂತ ಕುತೂಹಲ ಕೆರಳಿಸಿರುವ ಗೌರಿ ಲಂಕೇಶ್ ಹತ್ಯೆ ಪ್ರಕರಣ ಕೆಲ ದಿನದಿಂದ ಹೆಚ್ಚಿನ ಚುರುಕು ಪಡೆದುಕೊಂಡಿದೆ. ಇದೀಗ ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ನಿವಾಸಿಯೊಬ್ಬರನ್ನು ವಿಶೇಷ ತನಿಖಾ ತಂಡ ಬಂಧಿಸಿದೆ.
ಬಂಧಿತ ಆರೋಪಿಯನ್ನು ಸುಳ್ಯ ಸಂಪಾಜೆ ಗ್ರಾಮದ ಮುಂಡಡ್ಕ ನಿವಾಸಿ ಮೋಹನ್ ನಾಯಕ್(30) ಎಂದು ಗುರುತಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಈತನನ್ನು ಬಂಧಿಸಲಾಗಿದ್ದು, ಗುರುವಾರ ಸಂಜೆ ಬೆಂಗಳೂರು 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದೀಗ ಬಂಧಿತ ಆರೋಪಿಯನ್ನು ನ್ಯಾಯಾಲಯವು 14 ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಿದೆ ಎಂದು ತನಿಖಾಧಿಕಾರಿ ಎಂ.ಎನ್.ಅನುಚೇತ್ ಮಾಹಿತಿ ನೀಡಿದ್ದಾರೆ.
ಮೋಹನ್ ನಾಯಕ್ ಕುಶಾಲ ನಗರದಲ್ಲಿ ನಾಟಿ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಶಂಕಿತ ಶೂಟರ್ ಪರಶುರಾಮ ವಾಗ್ಮೋರೆಗೆ ಈತ ನೆರವು ನೀಡಿದ್ದಾನೆ ಎಂದು ತಿಳಿದುಬಂದ ಹಿನ್ನೆಲೆ, ಈತನನ್ನು ಬಂಧಿಸಲಾಗಿದೆ. ಇದೀಗ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಈತನ ಬಂಧನದಿಂದ ಮಹತ್ವದ ಸುಳಿವು ಸಿಗಲಿದೆ ಎಂದು ಹೇಳಲಾಗುತ್ತಿದೆ.