ಮಂಗಳೂರು, ಜು20: ಕರಾವಳಿಯಲ್ಲಿ ಮಳೆ ಕಡಿಮೆಯಾಗಿದ್ದು, ಈ ಹಿನ್ನೆಲೆಯಲ್ಲಿ ನಗರದ ಹೊರವಲಯದ ಉಳ್ಳಾಲ ಹಾಗೂ ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತದ ಪ್ರಮಾಣ ಕಡಿಮೆಯಾಗಿದೆ.
ಕಳೆದ 5 ದಿನಗಳಿಂದ ಕರಾವಳಿಯ ಉದ್ದಕ್ಕೂ ಕಡಲಿನ ಅಲೆಗಳ ಹೊಡೆತ ಜೋರಾಗಿತ್ತು. ಪರಿಣಾಮ ಕರಾವಳಿಯಲ್ಲಿ ವ್ಯಾಪಕವಾಗಿ ಕಡಲ್ಕೊರೆತ ಆರಂಭವಾಗಿತ್ತು. ಆದರೆ ಕಳೆದ ರಾತ್ರಿಯಿಂದ ನಗರದ ಹೊರವಲಯದ ಉಳ್ಳಾಲ ಹಾಗೂ ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತದ ಪ್ರಮಾಣ ಕಡಿಮೆಯಾಗಿದೆ. ಪರಿಣಾಮ, ಉಳ್ಳಾಲ ಪ್ರದೇಶದ ಕೈಕೊ, ಕಿಲೇರಿಯಾ ನಗರ, ಮಕ್ಕಚೇರಿಯಲ್ಲಿ ಜನರ ಆತಂಕ ಕಡಿಮೆಯಾಗಿದೆ.
ಮಹಾಮಳೆಯಿಂದ ಕಡಲ್ಕೊರೆತ ತೀವ್ರಗೊಂಡ ಪರಿಣಾಮ, ಸೋಮೇಶ್ವರ ಉಚ್ಚಿಲದಲ್ಲಿ ಬಟ್ಟಪ್ಪಾಡಿಯಲ್ಲಿ ಹಾಕಲಾಗಿದ್ದ ತಾತ್ಕಾಲಿಕ ತಡೆಗೋಡೆಯ ಬೃಹತ್ ಗಾತ್ರದ ಕಲ್ಲುಗಳು ಸಮುದ್ರಪಾಲಾಗುತ್ತಿತ್ತು. ಈಗಲೂ ಇದು ಮುಂದುವರೆದಿದ್ದು, ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.
20 ಕುಟುಂಬಗಳನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, 10 ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿದೆ. ಮತ್ತೇ ಕಡಲ್ಕೊರೆತ ಹೆಚ್ಚಾದರೆ ಈ ಮನೆಗಳು ಕಡಲ ಒಡಲು ಸೇರುವ ಆತಂಕವಿದೆ.