ಉಡುಪಿ, ಜು 19: ಇಂದು ಮುಂಜಾನೆ ಸಂಶಯಾಸ್ಪದ ರೀತಿಯಲ್ಲಿ ವಿಧಿವಶರಾದ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಪಾರ್ಥೀವ ಶರೀರ ಬೃಂದಾವನಸ್ಥಗೊಳಿಸಲಾಯಿತು. ಪಾರ್ಥೀವ ಶರೀರದ ಅಂತ್ಯಕ್ರಿಯೆ ಹಿರಿಯಡ್ಕದ ಶಿರೂರು ಮೂಲ ಮಠದಲ್ಲಿ ನೆರವೇರಿಸಲಾಯಿತು. ಅಪಾರ ಭಕ್ತರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಹಿರಿಯಡ್ಕದಲ್ಲಿರುವ ಮೂಲ ಮಠದ ಸ್ವರ್ಣಾ ನದಿ ತಟದಲ್ಲಿ ಅಂತಿಮ ಕ್ರಿಯೆ ನೆರವೇರಿಸಲಾಯಿತು.
ಉಡುಪಿಯಿಂದ 21 ಕಿಲೋ ಮೀಟರ್ ದೂರದಲ್ಲಿರುವ ಶಿರೂರು ಮೂಲ ಮಠದತ್ತ ಮೆರವಣಿಗೆ ಮೂಲಕ ಪಾರ್ಥಿವ ಶರೀರ ತರಲಾಯಿತು. ಉಡುಪಿಯ ಕೃಷ್ಣ ಮಠದಲ್ಲಿ ಪೂಜೆ ಬಳಿಕ ಪಾರ್ಥಿವ ಶರೀರವನ್ನು ಶಿರೂರಿನತ್ತ ರವಾನೆ ಮಾಡಲಾಯಿತು. ಶೀರೂರು ಮೂಲ ಮಠದ ಆವರಣದಲ್ಲಿಯೇ ಶಾಸ್ತ್ರೋಕ್ತವಾಗಿ ಶೀರೂರು ಶ್ರೀಗಳ ಪಾರ್ಥಿವ ಶರೀರಕ್ಕೆ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು. ಇನ್ನು ಶ್ರೀಗಳ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಅಷ್ಟಮಠಗಳ ಪೈಕಿ ಪಲಿಮಾರು ಶ್ರೀಗಳು ಮಾತ್ರ ಪಡೆದಿದ್ದಾರೆ. ಉಳಿದ ಶ್ರೀಗಳು ಯಾರೂ ಅಂತಿಮ ದರ್ಶನ ಪಡೆದಿಲ್ಲ. ಶೀರೂರು ಶ್ರೀಗಳ ಪಾರ್ಥಿವ ಶರೀರ ಕೃಷ್ಣ ಮಠಕ್ಕೆ ತರುವ ಸಂದರ್ಭದಲ್ಲಿ ಶ್ರೀಗಳ ಅಂತಿಮ ದರ್ಶನಕ್ಕಾಗಿ ಭಕ್ತ ಸಾಗರವೇ ಹರಿದು ಬಂದಿತ್ತು. ಕನಕನ ಕಿಂಡಿ ಮೂಲಕ ಶ್ರೀ ಕೃಷ್ಣನ ದರ್ಶನ ಮಾಡಲಾಯಿತು. ಶಿರೂರು ಮಠದ ವತಿಯಿಂದ ರಥಬೀದಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.