ಮಂಗಳೂರು,ಸೆ28: ಒಂದೆಡೆ ದಸರಾ ಹಬ್ಬವನ್ನು ಕಾಂಗ್ರೆಸ್ ರಾಜ್ಯಧ್ಯಕ್ಷ ಪರಮೇಶ್ವರ್ ಅವರಿಂದ ಉದ್ಘಾಟನೆಯನ್ನು ಮಾಡಿಸಿದ ಜನಾರ್ದನ ಪೂಜಾರಿ ಮತ್ತೊಂದೆಡೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಜೊತೆ ಮಾತುಕತೆ ನಡೆಸಿ ಅಚ್ಚರಿ ಮೂಡಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿಯವರು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಬಗ್ಗೆ ಮೃಧು ಧೋರಣೆ ಹೊಂದಿದ್ದಾರೆ ಎಂದು ಈ ಹಿಂದಿನಿಂದಲೂ ಮಾತು ಕೇಳಿ ಬರುತ್ತಿತ್ತು. ಎರಡು ವರ್ಷದ ಹಿಂದೆ ಕುದ್ರೋಳಿ ದಸರದಲ್ಲಿಯೂ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಜನಾರ್ದನ ಪೂಜಾರಿ ಮುಖಾಮುಖಿಯಾಗಿದ್ದರು. ಇತ್ತೀಚೆಗೆ ರಾಜ್ಯ ಸರಕಾರ ಕೊಲ್ಲೂರು ದೇವಾಲಯದಿಂದ ಕಲ್ಲಡ್ಕ ಶಾಲೆಗೆ ಅನ್ನದ ಹೆಸರಿನಲ್ಲಿ ನೀಡುತ್ತಿದ್ದ ಹಣವನ್ನು ನಿಲ್ಲಿಸಿದ ವಿಚಾರಕ್ಕೆ ಸಂಬಂಧಿಸಿ ಜನಾರ್ದನ ಪೂಜಾರಿಯವರು ಕಲ್ಲಡ್ಕ ಭಟ್ ಪರ ನಿಂತು ತಮ್ಮದೆ ಪಕ್ಷದ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.
ಇಂದು ಕುದ್ರೋಳಿ ದಸರ ಕಾರ್ಯಕ್ರಮಕ್ಕೆ ಬಂದಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಜನಾರ್ದನ ಪೂಜಾರಿ ಅವರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿಯು ಕೂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರೊಂದಿಗೆ ಸರಕಾರವು ಕಲ್ಲಡ್ಕ ಶಾಲೆಗೆ ಅನ್ಯಾಯ ಮಾಡಿದೆ ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾಜಕೀಯವಾಗಿ ಆರ್ ಎಸ್ ಎಸ್ ಮತ್ತು ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ವಿರೋಧಿಸುತ್ತಲೆ ಬಂದಿರುವ ಕಾಂಗ್ರೆಸ್ ಪಕ್ಷದ ಮುಖಂಡ ಜನಾರ್ದನ ಪೂಜಾರಿ ಕಲ್ಲಡ್ಕ ಪ್ರಭಾಕರ್ ಭಟ್ ಜೊತೆ ಕುದ್ರೋಳಿ ದಸರ ದಿನದಂದು ನಡೆಸಿರುವ ಮಾತುಕತೆ ಭಾರಿ ಕುತೂಹಲ ಮೂಡಿಸಿದೆ