ಕುಂದಾಪುರ, ಜು 19: ರಾಜ್ಯ ಮೀನುಗಾರಿಕೆ ಇಲಾಖೆ ಸಚಿವ ವೆಂಕಟರಾವ್ ನಾಡಗೌಡ ಅವರು ಗುರುವಾರ ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶಕ್ಕೆ ಭೇಟಿ ನೀಡಿದರು.
ಗಂಗೊಳ್ಳಿ ಬಂದರಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ಬ್ರೇಕ್ ವಾಟರ್ ಕಾಮಗಾರಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದ ಅವರು ಮೀನುಗಾರರಿಂದ ಅಹವಾಲು ಸ್ವೀಕರಿಸಿದರು. ಮೀನುಗಾರಿಕಾ ಇಲಾಖೆಯ ನಿರ್ದೇಶಕ ಎಚ್.ಎಸ್. ವೀರಪ್ಪ ಗೌಡ ಮತ್ತು ಬಂದರು ಮತ್ತು ಒಳನಾಡು ಜಲ ಸಾರಿಗೆ ಕಾರ್ಯಪಾಲಕ ಅಭಿಯಂತರ ನಾಗರಾಜ ಅವರು ವಿವಿಧ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.
ರಾಜ್ಯದಲ್ಲಿ ಮೀನುಗಾರಿಕೆಗೆ ಹಾಗೂ ಮೀನುಗಾರರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ 50 ಸಾವಿರ ರೂ. ಸಾಲ ನೀಡಲು ರಾಜ್ಯ ಸರಕಾರ ನಿರ್ಧರಿಸಿದ್ದು, ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಆದೇಶ ಹೊರಡಿಲಾಗುವುದು. ಕೇಂದ್ರ ಸರಕಾರ ಸೀಮೆಎಣ್ಣೆ ಸರಬರಾಜನ್ನು ಕಡಿಮೆ ಮಾಡಿರುವುದರಿಂದ ನಾಡದೋಣಿ ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆಯನ್ನು ವಿತರಿಸಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹಿಂದೇಟು ಹಾಕಿದ್ದು, ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಈ ಹಿಂದಿನಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮೂಲಕ ಸಬ್ಸಿಡಿ ಸೀಮೆಎಣ್ಣೆ ವಿತರಿಸಲು ಆದೇಶ ನೀಡಲಾಗಿದೆ ಎಂದು ರಾಜ್ಯ ಮೀನುಗಾರಿಕೆ ಇಲಾಖೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.
ಅವರು ಗುರುವಾರ ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ ಬಳಿಕ ನಡೆದ ಸಭೆಯಲ್ಲಿ ಮೀನುಗಾರರನ್ನು ಉದ್ದೇಶಿಸಿ ಮಾತನಾಡಿದರು.
ಜೆಡಿಎಸ್ ಪಕ್ಷದ ಪ್ರಣಾಳಿಕೆಯಂತೆ ಪ್ರಥಮ ಹಂತದಲ್ಲಿ ರೈತರ ಸುಮಾರು 11 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಮುಂದಿನ ಹಂತದಲ್ಲಿ ಮೀನುಗಾರರ ಸಾಲ ಮನ್ನಾ ಮಾಡಲು ಸರಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಆಡಳಿತ ನಡೆಸುತ್ತಿದ್ದರೂ ಕೊಟ್ಟ ಮಾತಿನಂತೆ ಹಿಂದಿನ ರೈತರ ಸಾಲ ಮನ್ನಾ ಮಾಡಲಾಗಿದೆ. ಕೇಂದ್ರ ಸರಕಾರ ಸೀಮೆಎಣ್ಣೆ ಪೂರೈಕೆಯನ್ನು ಕಡಿಮೆ ಮಾಡಿರುವುದರಿಂದ ದೋಣಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲು ರಾಜ್ಯ ಸರಕಾರ ಚಿಂತನೆ ನಡೆಸಿದೆ. ಜರ್ಮನ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ ಬೋಟ್ ಪ್ರಾಯೋಗಿಕವಾಗಿ ಮಲ್ಪೆಯಲ್ಲಿ ಪರೀಕ್ಷೆ ಮಾಡಲಾಗಿದ್ದು, ಇದು ಯಶಸ್ವಿಯಾದರೆ ಎಲ್ಲಾ ಮೀನುಗಾರರು ಇದನ್ನು ಅಳವಡಿಸುವ ಚಿಂತನೆ ಮಾಡಬೇಕು. ಇಲೆಕ್ಟ್ರಾನಿಕ್ ಇಂಜಿನ್ ಅಳವಡಿಕೆ ಬಗ್ಗೆ ರಾಜ್ಯ ಸರಕಾರ ಮೀನುಗಾರರ ಜೊತೆ ಕೈಜೋಡಿಸಲಿದೆ ಎಂದು ಅವರು ಹೇಳಿದರು.
ಜೆಟ್ಟಿ ನಿರ್ಮಾಣದಲ್ಲಿ ಅನೇಕ ತಾಂತ್ರಿಕತೆ ಬೆಳೆದಿದ್ದು, ಫ್ಲೋಟಿಂಗ್ ಜೆಟ್ಟಿ ನಿರ್ಮಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಗೋವಾ ರಾಜ್ಯದಲ್ಲಿ ಫ್ಲೋಟಿಂಗ್ ಜೆಟ್ಟಿ ನಿರ್ಮಿಸಲಾಗಿದ್ದು ಇದನ್ನು ಪರೀಕ್ಷಿಸಲು ಮತ್ತು ಅಧ್ಯಯನ ನಡೆಸಲು ಇಲಾಖೆಯ ಉನ್ನತ ಅಧಿಕಾರಿಗಳ ಮತ್ತು ತಂತ್ರಜ್ಞರ ತಂಡವನ್ನು ಗೋವಾಕ್ಕೆ ಕಳುಹಿಸಿಕೊಡಲಾಗುವುದು. ಫ್ಲೋಟಿಂಗ್ ಜೆಟ್ಟಿ ಯಶಸ್ವಿಯಾದರೆ ರಾಜ್ಯದ ವಿವಿಧ ಮೀನುಗಾರಿಕೆ ಬಂದರಿನಲ್ಲಿ ಫ್ಲೋಟಿಂಗ್ ಜೆಟ್ಟಿ ಅನುಷ್ಠಾನಗೊಳಿಸುವ ಪ್ರಯತ್ನ ನಡೆಸಲಾಗುವುದು ಎಂದರು.
ಗಂಗೊಳ್ಳಿ ಮ್ಯಾಂಗನೀಸ್ ವಾರ್ಫ್ ಪ್ರದೇಶವನ್ನು ಮೀನುಗಾರಿಕಾ ಇಲಾಖೆಗೆ ಹಸ್ತಾಂತರಿಸಲು ಪ್ರಸ್ತಾವನೆಯನ್ನು ಬಂದರು ಇಲಾಖೆಗೆ ಸಲ್ಲಿಸಲಾಗುವುದು. ಮೀನುಗಾರಿಕಾ ಇಲಾಖೆ ಮೂಲಕ ಆದ್ಯತೆ ಮೇರೆಗೆ ಮೀನುಗಾರಿಕಾ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಮೀನುಗಾರರಿಗೆ ಮನೆ ನಿರ್ಮಿಸಲು ಹೌಸಿಂಗ್ ಬೋರ್ಡ್ ಎಚಿಡಿ ಜೊತೆ ಮಾತುಕತೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲು ಸೂಚನೆ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಮಾತನಾಡಿ, ಗಂಗೊಳ್ಳಿಯಲ್ಲಿ ಮೀನುಗಾರಿಕೆಗೆ ಮತ್ತು ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದರೂ ಯಾವುದೇ ಯೋಜನೆ ಈ ಭಾಗದಲ್ಲಿ ಅನುಷ್ಠಾನಗೊಂಡಿಲ್ಲ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಐದು ಮೀನುಗಾರಿಕಾ ಬಂದರುಗಳಿದ್ದು, ಗಂಗೊಳ್ಳಿ ಬಂದರು ಇನ್ನೂ ಹಿಂದುಳಿದ ಕಾಲದಲ್ಲಿದೆ. ಗಂಗೊಳ್ಳಿ ಮೀನುಗಾರಿಕಾ ಬಂದರು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಹೀಗಾಗಿ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಸರ್ವತೋಮುಖ ಅಭಿವೃದ್ಧಿಗೆ ಸರಕಾರ ಚಿಂತನೆ ನಡೆಸಬೇಕು. ಮೀನುಗಾರರ ಕಷ್ಟಗಳನ್ನು ಹಾಗೂ ಸಮಸ್ಯೆಗಳನ್ನು ಅರಿತು ಸ್ಪಂದಿಸುವ ಕಾರ್ಯ ಸರಕಾರದಿಂದ ಆಗಬೇಕು. ಬಂದರು ಅಭಿವೃದ್ಧಿಯ 5 ಕೋಟಿ ರೂ. ಅನುದಾನವನ್ನು ಗಂಗೊಳ್ಳಿ ಅಭಿವೃದ್ಧಿಗಾಗಿ ವಿನಿಯೋಗಿಸಬೇಕು. ಮೀನುಗಾರರ ಸಾಲ ಮನ್ನಾ ಮಾಡಬೇಕು ಎಂದು ಮನವಿ ಮಾಡಿದರು.
ತಾಪಂ ಸದಸ್ಯರಾದ ಸುರೇಂದ್ರ ಖಾರ್ವಿ, ನಾರಾಯಣ ಕೆ. ಗುಜ್ಜಾಡಿ, ಮೀನುಗಾರಿಕಾ ಇಲಾಖೆಯ ನಿರ್ದೇಶಕ ಎಚ್.ಎಸ್. ವೀರಪ್ಪ ಗೌಡ, ಇಲಾಖೆಯ ಜಂಟಿ ನಿರ್ದೇಶಕ ಎಂ.ಎಲ್. ದೊಡ್ಡಮನಿ, ಸಚಿವರ ಆಪ್ತ ಸಹಾಯಕ ವಿರೂಪಾಕ್ಷ, ಬಂದರು ಮತ್ತು ಒಳನಾಡು ಜಲ ಸಾರಿಗೆ ಕಾರ್ಯಪಾಲಕ ಅಭಿಯಂತರ ನಾಗರಾಜ, ಮೀನುಗಾರಿಕಾ ಉಪನಿರ್ದೇಶಕ ಪಾರ್ಶ್ವನಾಥ, ಸಹಾಯಕ ನಿರ್ದೇಶಕಿ ಅಂಜನಾದೇವಿ, ಐಸ್ಪ್ಲಾಂಟ್ ಅಸೋಸಿಯೇಶನ್ ಅಧ್ಯಕ್ಷ ರಾಜೇಂದ್ರ ಸುವರ್ಣ, ಗಂಗೊಳ್ಳಿ ಬಂದರು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಆರ್ಕಾಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಗಂಗೊಳ್ಳಿ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ ಸ್ವಾಗತಿಸಿದರು. ಗಂಗೊಳ್ಳಿ ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ರಮೇಶ ಕುಂದರ್ ಕಾರ್ಯಕ್ರಮ ನಿರೂಪಿಸಿದರು.