ಮಂಗಳೂರು ಸೆ28: " ಕಾರ್ಯವೈಖರಿ ಬಗ್ಗೆ ಅಥವಾ ತಪ್ಪು ನಿರ್ಣಯಗಳ ಬಗ್ಗೆ ಪ್ರಶ್ನೆ ಕೇಳಿದವರನ್ನು ಸರಕಾರವು ತಕ್ಷಣ ದೇಶದ್ರೋಹಿಗಳೆಂದು ಬಿಂಬಿಸುವ ಕೆಲಸವನ್ನು ಮಾಡುತ್ತಿದೆ. ಜನರ ಅಹಾವಾಲುಗಳನ್ನು ಕೇಳುವ ಹುಮ್ಮಸ್ಸು ಸರಕಾರಕ್ಕೆ ಇಲ್ಲವಾಗಿದೆ. ಏನಿದ್ದರೂ ಸರಕಾರದ ಗಮನ ಹಾಗೂ ಚರ್ಚೆಗಳು ’ಕವ್’ ಹಾಗೂ ’ಲವ್’ ಎಂಬ ಎರಡು ಪದಗಳ ಬಗ್ಗೆ ಮಾತ್ರ ಸೀಮಿತವಾಗಿದೆ" ಎಂದು ಅಖಿಲ ಭಾರತ ಪ್ರಗತಿಪರ ಮಹಿಳೆಯರ ಸಂಘದ ಅಧ್ಯಕ್ಷೆ ಕವಿತಾ ಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಮಂಗಳೂರಿನಲ್ಲಿ ಇಂದು ಆಯೋಜಿಸಲಾಗಿದ್ದ ’ಸ್ವಾತಂತ್ರ್ಯ ಮತ್ತು ಸೌಹಾರ್ದತೆ ನಡಿಗೆ’ ಎಂಬ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿದರು.
ಮುಂದೆ ಮಾತಾನಾಡುತ್ತಾ ಅವರು "ನಮ್ಮ ದೇಶದ ಸೌಹಾರ್ದತೆಯು ಇಂದು ಅಪಾಯದ ಅಂಚಿನಲ್ಲಿದೆ. ಕೆಲ ಸಮಾಜ ಘಾತಕ ಶಕ್ತಿಗಳು ಸೌಹಾರ್ದತೆಗೆ ತಮ್ಮದೇ ಆದ ವ್ಯಾಖ್ಯಾನವನ್ನು ಕೊಟ್ಟು ದೇಶದ ಒಗ್ಗಟ್ಟಿನಲ್ಲಿ ಬಿರುಕನ್ನು ಸೃಷ್ಟಿ ಮಾಡಲು ಪ್ರಯತ್ನ ಮಾಡುತ್ತಿವೆ. ಎಲ್ಲರೂ ತಮ್ಮ ಸಿದ್ಧಾಂತಕ್ಕೆ ತಲೆಬಾಗಬೇಕು.ಇದರ ಹೊರತು ಸೌಹಾರ್ದತೆ ಸಾಧ್ಯವಿಲ್ಲ ಎಂಬುದು ಇವರ ಅಭಿಪ್ರಾಯವಾಗಿದೆ.
ಗೌರಿ ಲಂಕೇಶ್,ಕಲ್ಬುರ್ಗಿ ಮುಂತಾದ ಪ್ರಗತಿಪರ ಚಿಂತಕರ ಕೊಲೆಯಾದಗ ಈ ಶಕ್ತಿಗಳು ವಿವಿಧ ರೀತಿಯಲ್ಲಿ ಸಂಭ್ರಮಿಸಿದ್ದನ್ನು ಗಮನಿಸಿದರೆ ಈ ಕೊಲೆಗಳ ಹಿಂದೆ ಯಾರು ಇದ್ದಾರೆ ಎಂದು ತಿಳಿದುಕೊಳ್ಳಲು ಹೆಚ್ಚಿನ ಸಮಯ ಬೇಕಾಗಿಲ್ಲ. ಆದರೆ ಕೊಲೆಗಳಿಂದಾಗಿ ವೆಕ್ತಿಗಳನ್ನು ಇಲ್ಲದಾಗಿಸಬಹುದು, ಅವರ ಸೈದ್ಧಾಂತಿಕ ನಿಲುವುಗಳನಲ್ಲ.
ಗೌರಿ ಲಂಕೇಶ್ ಹತ್ಯೆಗೆ ರಾಜ್ಯ ಸರ್ಕಾರ ಕೂಡ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ. ಕಲ್ಬುರ್ಗಿಯವರ ಹಂತಕರನ್ನು ಪತ್ತೆ ಹಚ್ಚಿ ಕಾನೂನಿನ ಮುಂದೆ ತರುವ ಪ್ರಯತ್ನ್ ಸರ್ಕಾರದಿಂದ ಆಗಿರುತ್ತಿದ್ದರೆ ಗೌರಿಯ ಹತ್ಯೆ ವೇಳೆ ಹಂತಕರು ಎರಡು ಬಾರಿ ಯೋಚಿಸುತ್ತಿದ್ದರು. ಆದರೆ ೀ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ" ಎಂದರು.
ಬಹಿರಂಗ ಸಭೆಯ ಮೊದಲು ಪ್ರಗತಿಪರ ಚಿಂತಕರು, ಗೌರಿ ಬೆಂಬಲಿಗರು ಹಾಗೂ ನಗರದ ಶಾಲಾ ಕಾಲೇಜುಗಳ ಸಾವಿರಕ್ಕಿಂತಲೂ ಮೇಲ್ಪಟ್ಟು ವಿಧ್ಯಾರ್ಥಿಗಳು ಅಂಬೇಡ್ಕರ್ ವ್ರತ್ತದಿಂದ ಸಭಾಂಗಣದ ವರೆಗೆ ಬಾಯಿಗೆ ಕಪ್ಪು ಪಟ್ಟಿ ಕಟ್ಟಿ ಮೆರವಣಿಗೆ ನಡೆಸಿದರು.