ಉಳ್ಳಾಲ, ಜು 18 : ‘ಭಾರತೀಯರೆಲ್ಲರೂ ಒಳ್ಳೆಯವರು ಅನ್ನುವ ವಿಶ್ವಾಸವಿದೆ. ಇದೀಗ ಬಸ್ಸಿನಲ್ಲಿ ಕಳೆದುಕೊಂಡಿರುವ ಐಫೋನ್ ಮೊಬೈಲನ್ನು ಹಿಂತಿರುಗಿಸಿದ ಬಸ್ಸು ನಿರ್ವಾಹಕರ ಪ್ರಾಮಾಣಿಕತನ ನನ್ನನ್ನು ಭಾರತೀಯರ ಮೇಲಿನ ಪ್ರೀತಿಯನ್ನು ಹಾಗೂ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ ’ ಎಂದು ಬಸ್ಸಿನಲ್ಲಿ ಐಫೋನ್ ಮೊಬೈಲನ್ನು ಕಳೆದುಕೊಂಡಿದ್ದ ಅಪಘಾನಿಸ್ತಾನ ಮೂಲದ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯ ಮನದಾಳದ ಮಾತು.
ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ವ್ಯಾಸಾಂಗ ಮಾಡುತ್ತಿರುವ ಸದಾಂ ಮುಕ್ರೇಷಿ ಮೂಲತ: ಅಪಘಾನಿಸ್ತಾನದ ಮಿರ್ ಖಾಸೇಂ ನಿವಾಸಿ. ಪ್ರಥಮ ವರ್ಷ ಪದವಿ ವಿದ್ಯಾಭ್ಯಾಸಕ್ಕೆ ಸೇರ್ಪಡೆಗೊಂಡಿರುವ ಇವರು ಬುಧವಾರ ಕಾಲೇಜು ಮುಗಿಸಿ ದೇರಳಕಟ್ಟೆಯಲ್ಲಿರುವ ವಿದ್ಯಾರ್ಥಿ ನಿಲಯಕ್ಕೆ ವಾಪಸ್ಸಾಗುವ ವೇಳೆ ಕಿಸೆಯಲ್ಲಿದ್ದ ಐಫೋನ್ ಮೊಬೈಲ್ ಕಳೆದುಹೋಗಿತ್ತು. ಅದಕ್ಕಾಗಿ ವಸತಿ ನಿಲಯದ ಸಿಸಿಟಿವಿ, ಕಾಲೇಜಿನ ಆಸುಪಾಸು ವಿವಿದೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ವಿದೇಶಿಗನಾಗಿರುವುದರಿಂದ ಪೊಲೀಸ್ ಠಾಣೆಗೂ ಹೋಗಲು ಹಿಂಜರಿದ ವಿದ್ಯಾರ್ಥಿ ತನ್ನ ಸಹಪಾಠಿಗಳಲ್ಲಿ ವಿಚಾರ ತಿಳಿಸಿದ್ದರು. ಅವರು ಸಿಕ್ಕವರು ವಾಪಸ್ಸು ತಂದುಕೊಡುವ ವಿಶ್ವಾಸ ವ್ಯಕ್ತಪಡಿಸಿದ್ದರು. ವಿಪರ್ಯಾಸವೆಂದರೆ ನೂತನವಾಗಿ ಖರೀದಿಸಿದ ಮೊಬೈಲಿನಲ್ಲಿದ್ದ ಸಿಮ್ ಕೂಡಾ ಆಕ್ಟಿವೇಷನ್ ಆಗದೇ, ಇಂಟರ್ ನೆಟ್ ಕೂಡಾ ಆಫ್ ಆಗಿತ್ತು. ಇದರಿಂದ ಮೊಬೈಲಿನ ಸಂಖ್ಯೆಗೂ, ವಾಟ್ಸ್ಯಾಪ್ ನಲ್ಲಿಯೂ ಕರೆ ಮಾಡಲು ಅಸಾಧ್ಯವಾಗಿತ್ತು. ಮೊಬೈಲ್ ಹೋದರೂ ತೊಂದರೆಯಿರಲಿಲ್ಲ ಆದರೆ ಅದರಲ್ಲಿ ಪ್ರಮುಖ ದಾಖಲೆಗಳು ಇದ್ದವು ಅನ್ನುವುದು ವಿದ್ಯಾರ್ಥಿ ಅಳಲಾಗಿತ್ತು.
ಪ್ರಾಮಾಣಿಕ ಮೆರೆದ ನಿರ್ವಾಹಕ: ಕೊಣಾಜೆ ಮಂಗಳೂರು ನಡುವೆ ಚಲಿಸುವ ಸುಶ್ಮಿತಾ ಸಿಟಿ ಬಸ್ಸಿನ ನಿರ್ವಾಹಕ ಮಂಜನಾಡಿ ನಿವಾಸಿ ನಾರಾಯಣ (51) ಎಂಬವರಿಗೆ ಬಸ್ಸಿನಲ್ಲಿ ಐಫೋನ್ ಮೊಬೈಲ್ ದೊರೆತಿತ್ತು. ಮೊಬೈಲಿಗೆ ಕರೆ ಬಂದರೆ ತಿಳಿಸಿ ಅವರಿಗೆ ವಾಪಸ್ಸು ಕೊಡುವ ನಿರ್ಧಾರ ಮಾಡಿದ್ದರು. ಆದರೆ ಗಂಟೆಗಳಾದರೂ ಕರೆ ಬಂದಿರಲಿಲ್ಲ. ಇನ್ನು ಪೊಲೀಸರಿಗೆ ಮೊಬೈಲನ್ನು ಗುರುವಾರ ಬೆಳಿಗ್ಗೆ ನೀಡುವುದಾಗಿ ತಿಳಿದುಕೊಂಡ ನಿರ್ವಾಹಕರಿಗೆ ಮೊಬೈಲಿನ ಕವರಿನ ಒಳಗಡೆ ರಶೀದಿಯೊಂದು ಪತ್ತೆಯಾಗಿತ್ತು. ಅದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಚಲನ್ ಕಟ್ಟಿದ ರಶೀದಿಯಾಗಿತ್ತು. ಅದರ ಬೆನ್ನು ಹಿಡಿದ ನಿರ್ವಾಹಕ ನಾರಾಯಣ ಅವರಿಗೆ ಆತ ಕೊಣಾಜೆ ಮಂಗಳೂರು ವಿ.ವಿ ವಿದ್ಯಾರ್ಥಿಯಾಗಿರುವುದಾಗಿ ತಿಳಿದುಬಂತು. ಖುದ್ದು ತಾವೇ ಕೊಣಾಜೆಯ ಆಡಳಿತ ಸೌಧಕ್ಕೆ ತೆರಳಿ ಅಲ್ಲಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಿಯಾ ಅವರನ್ನು ಸಂಪರ್ಕಿಸಿ ವಿದ್ಯಾರ್ಥಿಯನ್ನು ಪತ್ತೆ ಹಚ್ಚಿ ಆತನಿಗೆ ಮೊಬೈಲನ್ನು ನೀಡಿ ಪ್ರಾಮಾಣಿಕತೆಯನ್ನು ಮೆರೆದರು. ನಿರ್ವಾಹಕರ ಪ್ರಾಮಾಣಿಕತೆ ಅಪಘಾನಿಸ್ತಾನದಲ್ಲಿಯೂ ಸದ್ದಾಗುವುದರಲ್ಲಿ ಸಂಶಯವಿಲ್ಲ.
ಆದರ್ಶ ನಿರ್ವಾಹಕ
ಹಲವು ವರ್ಷಗಳಿಂದ ಒಂದೇ ಬಸ್ಸಿನಲ್ಲಿ ನಿರ್ವಾಹಕರಾಗಿರುವ ನಾರಾಯಣ ಇವರು ತಮ್ಮನ್ನು ತಾವು ಹಲವು ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡವರು. ಅಸಹಾಯಕತೆಯಿಂದ ಆಸ್ಪತ್ರೆಯಲ್ಲಿ ದಾಖಲಾದವರ ಚಿಕಿತ್ಸೆಗೆ ತಮ್ಮ ಕೈಯಲ್ಲಿರುವ ಹಣವನ್ನು ಕೂಡಿಸುವುದರ ಜೊತೆ ಸ್ನೇಹಿತರಿಂದ ಸಂಗ್ರಹಿಸಿದ ಹಣವನ್ನು ಅವರಿಗೆ ನೀಡಿರುವ ಹಲವು ಉದಾಹರಣೆಗಳಿವೆ. ಇತರರಿಗೆ ಸಹಾಯಮಾಡುವುದರಲ್ಲಿ ಎತ್ತಿದ ಕೈ ಅನಿಸಿಕೊಂಡಿರುವ ಇವರ ಸೇವೆಯನ್ನು ಗುರುತಿಸಿ ಹಲವು ಸಂಘಟನೆಗಳು ಈ ಹಿಂದೆ ಗೌರವಿಸಿದ ಉದಾಹರಣೆಗಳು ಇವೆ. ಇದೀಗ ಸಾವಿರಾರು ಬೆಲೆಬಾಳುವ ಮೊಬೈಲನ್ನು ವಿದೇಶಿ ವಿದ್ಯಾರ್ಥಿಗೆ ಹಿಂತಿರುಗಿಸುವ ಮೂಲಕ ಇತರೆ ಬಸ್ ಸಿಬ್ಬಂದಿಗೆ ಆದರ್ಶಪ್ರಯರಾಗಿದ್ದಾರೆ.