ಬಂಟ್ವಾಳ, ಜು 18: ವ್ಯಕ್ತಿಯೊಬ್ಬರು ಮಳೆ ನೀರು ತುಂಬಿ ಹರಿಯುತ್ತಿರುವ ತೋಡಿಗೆ ಬಿದ್ದು ನಾಪತ್ತೆಯಾದ ಘಟನೆ ಉಳಿ ಗ್ರಾಮದ ಬನತ್ತಪಲ್ಕೆ ಎಂಬಲ್ಲಿ ಸಂಭವಿಸಿದೆ. ಬನತ್ತಪಲ್ಕೆ ನಿವಾಸಿ ಅಹ್ಮದ್ ಬ್ಯಾರಿ ನಾಪತ್ತೆಯಾದವರು.
ಅವರು ಮಂಗಳವಾರ ಸಂಜೆ ಸುಮಾರು ೫ ಗಂಟೆಯ ಹೊತ್ತಿಗೆ ತಮ್ಮ ತೋಟದಿಂದ ಹಸುಗಳಿಗೆ ಹುಲ್ಲು ತರಲು ತೆರಳಿದ್ದರು. ಆ ಹೊತ್ತಿನಲ್ಲಿ ವಿಪರೀತ ಮಳೆ ಬಂದು ತೋಡಿನಲ್ಲಿ ನೀರು ರಭಸವಾಗಿ ಹರಿಯುತ್ತಿತ್ತು. ಈ ತೋಡಿನ ಬದಿಯಲ್ಲಿ ಹುಲ್ಲು ತೆಗೆಯುತ್ತಿರುವ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿದೆ. ರಾತ್ರಿಯಾದರೂ ಮನೆಗೆ ಬಾರದೆ ಮನೆಮಂದಿ ಹುಡುಕಾಡಿದಾಗ ತೋಡಿನ ಬದಿಯಲ್ಲಿ ಕತ್ತಿ ಪತ್ತೆಯಾಗಿತ್ತು. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಇಸ್ಮಾಯಿಲ್ ಮಗ ದೂರು ನೀಡಿದ್ದು, ಪುಂಜಾಲಕಟ್ಟೆ ಠಾಣಾಧಿಕಾರಿ ಸತೀಶ್ ಬಲ್ಲಾಳ್ ಹಾಗೂ ಬಂಟ್ವಾಳ ಅಗ್ನಿ ಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಶೋಧಾ ಕಾರ್ಯ ಮುಂದುವರಿಸಿದ್ದಾರೆ.