ಮಂಗಳೂರು, ಜು 18: ಹೈ ಟೆನ್ಶನ್ ವಿದ್ಯುತ್ ಪ್ರವಹಿಸಿ ಮೆಸ್ಕಾಂ ಗುತ್ತಿಗೆ ಕಾರ್ಮಿಕರೋರ್ವರು ಮೃತಪಟ್ಟು 8 ಮಂದಿ ಗಂಭೀರ ಗಾಯಗೊಂಡ ಘಟನೆ ಜು18 ರ ಬುಧವಾರ ನಗರದ ಮರವೂರು ಜಂಕ್ಷನ್ ನಲ್ಲಿ ನಡೆದಿದೆ. ಮೃತರನ್ನು ತೆಂಕ ಎಡಪದವಿನ ಗಣೇಶ್ (55) ಎಂದು ಗುರುತಿಸಲಾಗಿದೆ. ಘಟನೆಯಿಂದ ಮೆಸ್ಕಾಂ ಗುತ್ತಿಗೆ ಕಾರ್ಮಿಕರಾದ ದಿನೇಶ್, ಆನಂದ್, ವಿಶ್ವನಾಥ್ , ಗೋಪಾಲ , ಕೃಷ್ಣ, ದನಂಜಯ, ಪದ್ಮನಾಭ ಮತ್ತು ಮೋಹನ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಣೇಶ್ ಹಾಗೂ ಇತರ 12 ಗುತ್ತಿಗೆ ಕಾರ್ಮಿಕರ ಜತೆಯಲ್ಲಿ ಬುಧವಾರ ಮರವೂರು ಜಂಕ್ಷ ನ್ ನಲ್ಲಿ ಹೊಸ ವಿದ್ಯುತ್ ಕಂಬ ಅಳವಡಿಸುವ ಕೆಲಸ ನಿರ್ವಹಿಸುತ್ತಿದ್ದರು. ಇದೇ ಸಂದರ್ಭ ಪಕ್ಕದಲ್ಲಿರುವ ಹೈ ಟೆನ್ಶನ್ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಸಂಬಂಧಪಟ್ಟವರಿಗೆ ತಿಳಿಸಿದ್ದಾರೆ. ಆದರೆ ಇದೇ ಸಂದರ್ಭ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂಬ ತಪ್ಪು ಮಾಹಿತಿ ಬಂದಿದ್ದು ಕಾರ್ಮಿಕರು ಕೆಲಸ ಮುಂದುವರಿಸಿದ್ದಾರೆ. ಪರಿಣಾಮ ಕಾರ್ಮಿಕರಿಗೆ ವಿದ್ಯುತ್ ಪ್ರವಹಿಸಿದೆ. ಘಟನೆಯಲ್ಲಿ ಮೇಲ್ನೋಟಕ್ಕೆ ಮೆಸ್ಕಾಂ ನಿರ್ಲಕ್ಷ್ಯ ಎದ್ದುಕಾಣುತ್ತಿದ್ದು, ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.