ಕುಂದಾಪುರ, ಜು 18: ಕಳೆದ ಎರಡು ತಿಂಗಳಿನಿಂದ ವಂಡ್ಸೆ ಪರಿಸರದಲ್ಲಿ ಹಗಲಿನಲ್ಲಿಯೇ ಯಾರೂ ಇಲ್ಲದ ವೇಳೆಯಲ್ಲಿಯೇ ಮನೆಗಳಿಗೆ ನುಗ್ಗಿ ಮಹಿಳೆಯರ ಬಟ್ಟೆಯನ್ನು ಕಳವು ಮಾಡುವ ಸೈಕೋ ಮನಸ್ಥಿಯ ವ್ಯಕ್ತಿ ಆತಂಕ ಮೂಡಿಸಿದ್ದಾನೆ. ಹಗಲು ವೇಳೆಯಲ್ಲಿಯೇ ಬಾಗಿಲು ಹಾಕಿದ ಮನೆಯ ಹೆಂಚು ತಗೆದು ಒಳ ನುಗ್ಗುವ ಚೋರ ಕೇವಲ ಮಹಿಳೆಯರ ಬಟ್ಟೆಗಳಷ್ಟೆ ಕದ್ದುಕೊಂಡು ಯಾರಿಗೂ ಗೊತ್ತಿಲ್ಲದಂತೆ ಮಾಯವಾಗುತ್ತಿದ್ದಾನೆ.
ಸಾಂದರ್ಭಿಕ ಚಿತ್ರ
ಈಗಾಗಲೇ ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೇ ಐದಾರು ಪ್ರಕರಣಗಳು ವರದಿಯಾಗಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇದು ವಿಕೃತ ಮನಸ್ಥಿತಿಯ ಸೈಕೋಗಳದ್ದೆ ಕೆಲಸ ಎನ್ನಲಾಗಿದೆ. ಒಂದು ಕಡೆ ಮನೆಗೆ ನುಗ್ಗಿ 20 ಸಾವಿರ ನಗದನ್ನು ಕೂಡಾ ಕಳವು ಮಾಡಲಾಗಿದೆ ಎನ್ನಲಾಗಿದೆ. ಉಳಿದ ಕಡೆಗಳಲ್ಲಿ ಬೆಲೆಬಾಳುವ ವಸ್ತುಗಳು ಇದ್ದರೂ ಕೂಡಾ ಕೇವಲ ಹಳೆಯ ಹಾಗೂ ಹೊಸ ಬಟ್ಟೆಗಳನ್ನಷ್ಟೆ ಕದ್ದುಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಈ ನಿಗೂಢ ಸೈಕೋ ಬಗ್ಗೆ ನಾಗರಿಕರಲ್ಲಿ ಆತಂಕ ವ್ಯಕ್ತವಾಗುತ್ತಿದ್ದು ಈ ವ್ಯಕ್ತಿಯನ್ನು ಕೂಡಲೇ ಪತ್ತೆ ಹಚ್ಚಬೇಕು, ಪೊಲೀಸ್ ಇಲಾಖೆ ಗಸ್ತು ಪಹರೆಯನ್ನು ಬಿಗಿಗೊಳಿಸಬೇಕು ಎನ್ನುವ ಆಗ್ರಹ ವ್ಯಕ್ತವಾಗುತ್ತಿದೆ.
ಈ ಕಳ್ಳ ಕದ್ದುಕೊಂಡು ಹೋದ ಬಟ್ಟೆಯನ್ನು ಏನು ಮಾಡುತ್ತಾನೆ ಎನ್ನುವುದಕ್ಕೆ ಸ್ಪಷ್ಟ ಉತ್ತರ ಲಭಿಸಿಲ್ಲ. ಆದರೆ ಇತ್ತೀಚೆಗೆ ಕಾಡಿನೊಳಗೆ ಒಂದಿಷ್ಟು ಮಹಿಳೆಯರ ಬಟ್ಟೆಗಳು ಪತ್ತೆಯಾಗಿದ್ದು, ಓರಣವಾಗಿ ಬಟ್ಟೆಯನ್ನು ಹಾಸಿದಂತೆ ಕಂಡು ಬರುತ್ತಿದೆ ಎನ್ನಲಾಗಿದೆ. ಈ ಬಟ್ಟೆಯನ್ನು ಕೂಡಾ ಕದ್ದಿದ್ದೆ ಎನ್ನಲಾಗಿದ್ದು, ಈತ ವಿಕೃತ ಕಾಮಿ ಎನ್ನುವ ಅಭಿಪ್ರಾಯ ಕೂಡಾ ವ್ಯಕ್ತವಾಗುತ್ತಿದೆ. ಈತ ಕಳವು ಬಟ್ಟೆ ಕಳವು ಮಾಡಿದ ನಂತರ ಅಲ್ಲಿ ನೀರು ಚೆಲ್ಲಿ ಹೋಗುತ್ತಾನೆ ಎನ್ನಲಾಗಿದೆ. ಮೂರ್ನಾಲ್ಕು ಪ್ರಕರಣಗಳಲ್ಲಿ ಯಥಾ ರೀತಿ ನೀರು ಚೆಲ್ಲಿದ್ದಾನಂತೆ. ಇದನ್ನೆಲ್ಲಾ ಗಮನಿಸಿದಾಗ ಐದಾರು ಪ್ರಕರಣಗಳಲ್ಲಿ ಓರ್ವನೆ ಮಾಡಿರುವ ಸಾಧ್ಯತೆಗಳು ದಟ್ಟವಾಗಿವೆ.
ಈತ ಹಗಲುವೇಳೆಯಲ್ಲಿ ಬಾಗಿಲು ಹಾಕಿದ ಮನೆಗಳನ್ನೇ ಗುರಿ ಮಾಡಿಕೊಂಡು ಹೆಂಚು ಕಿತ್ತು ಒಳ ಹೋಗಿ, ಬಟ್ಟೆಗಳೊಂದಿಗೆ ಮರೆಯಾಗುತ್ತಿದ್ದಾನೆ. ಈ ಬಗ್ಗೆ ಸ್ಥಳೀಯವಾಗಿ ಆತಂಕ ಆರಂಭವಾಗಿದ್ದು, ಕಳ್ಳನನ್ನು ಕೂಡಲೇ ಪತ್ತೆ ಹಚ್ಚಿ ಜನರ ಆತಂಕ ದೂರ ಮಾಡುವ ಕೆಲಸ ಪೊಲೀಸ್ ಇಲಾಖೆ ಮಾಡಬೇಕಾಗಿದೆ. ಈಗಾಗಲೇ ಗ್ರಾಮ ಪಂಚಾಯತ್ ಅಧ್ಯಕ್ಷರು ಜಿಲ್ಲಾ ಪೊಲೀಸ್ ವರಿಷ್ಠರಿಗೆ ಕೂಡಾ ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.