ಶಿವಮೊಗ್ಗ, ಜು 18: ಮುಖ್ಯಮಂತ್ರಿ ಕುಮಾರ ಸ್ವಾಮಿ ದಿಲ್ಲಿಯಲ್ಲಿ ಬುಧವಾರ ಕರೆದಿರುವ ಸಭೆಗೆ ಆಗಮಿಸುವ ರಾಜ್ಯದ ಸಂಸದರಿಗೆ ಒಂದು ಲಕ್ಷ ರೂ. ಬೆಲೆ ಬಾಳುವ ಐ ಫೋನ್ ನೀಡಿರುವುದು ವಿವಾದದ ಸ್ವರೂಪ ಪಡೆದುಕೊಂಡಿರುವುದು ಮೈತ್ರಿ ಸರ್ಕಾರವನ್ನು ಫೇಚಿಗೆ ಸಿಲುಕಿಸಿದೆ. ನಾಡಿನ ಹಿತ ರಕ್ಷಣೆಯ ಸಭೆಯಲ್ಲಿ ಭಾಗಿಯಾದವರಿಗೆ ಐ ಫೋನ್ ಆಮಿಷ ನೀಡಿದ್ದಾರೂ ಯಾಕೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈ ವಿಚಾರಕ್ಕೆ ಪ್ರತಿಕ್ರಿಯಿಸಿ ಶಿವಮೊಗ್ಗದಲ್ಲಿ ಮಾತನಾಡಿ, ನಮ್ಮ ಸಂಸದರು ಐಫೋನ್ ಗಿಫ್ಟ್ ಪಡೆಯುವುದಿಲ್ಲ. ಮಿತ ವ್ಯಯ ಸಾಧಿಸುವುದು ನಮ್ಮ ಗುರಿ ಎನ್ನುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ದುಂದುವೆಚ್ಚ ಮಾಡುತ್ತಿದ್ದಾರೆ. ಮೊದಲು ಸರ್ಕಾರ ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಲಿ. ಜನರಿಗೆ ರಾಜ್ಯದ ವಾಸ್ತವ ಸ್ಥಿತಿ ತಿಳಿಸಬೇಕು. ಇದರಿಂದ ಕಳೆದ ಸರ್ಕಾರದ ಆಡಳಿತ ತಿಳಿಯುತ್ತದೆ ಎಂದಿದ್ದಾರೆ.
ಇನ್ನೊಂದೆಡೆ ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿ, ನನಗೆ ನೀಡಿದ ಕಿಟ್ ನಲ್ಲಿ ಏನಿದೆ ಎಂಬುದನ್ನು ನಾನು ತೆರೆದು ನೋಡಿಲ್ಲ. ಅವರು ಕೊಟ್ಟ ಕಿಟ್ ನಲ್ಲಿರುವ ಗಿಫ್ಟ್ನ್ನು ವಾಪಸ್ ಕಳುಹಿಸಲು ಹೇಳಿದ್ದೇನೆ. ಗಿಫ್ಟ್ ಪಡೆಯುವ ಆಸಕ್ತಿಯೂ ನನಗಿಲ್ಲ. ರಾಜ್ಯದ ಹಿತಚಿಂತನೆ ಸಭೆಯಲ್ಲಿ ಹಾಜರಾಗುವುದು ನನ್ನ ಕರ್ತವ್ಯ, ಇದಕ್ಕೆ ಗಿಫ್ಟ್ ನೀಡಿ ಆಮಿಷ ಒಡ್ಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ರಾಜ್ಯ ಸರಕಾರ ನೀಡಿರುವ ಗಿಪ್ಟ್ ಗಾಗಿ 43 ಲಕ್ಷ ವೆಚ್ಚವಾಗಿದೆ. ರಾಜ್ಯದ 28 ಲೋಕಸಭಾ ಸದಸ್ಯರು, ಹಾಗೂ 12 ರಾಜ್ಯಸಭಾ ಸದಸ್ಯರಿಗೆ ಕೊಡುಗೆ ನೀಡಲು ಐ ಫೋನ್ ಗಾಗಿ 40ಲಕ್ಷ ರೂ ವೆಚ್ಚವಾಗಿದೆ. ಲೆದರ್ ಬ್ಯಾಗ್ ಗಾಗಿ 3.40 ಲಕ್ಷ ಖರ್ಚು ಮಾಡಲಾಗಿದೆ.