ಉಳ್ಳಾಲ, ಜು 17: ಉಳ್ಳಾಲದಲ್ಲಿ ಕಡಲ್ಕೊರೆತ ಮಂಗಳವಾರವೂ ಮುಂದುವರಿದಿದ್ದು, ಕಡಲ್ಕೊರೆತದಿಂದ ಅಪಾಯದಂಚಿನಲ್ಲಿರುವ ಮನೆಗಳಿಂದ ಸ್ಥಳಾಂತರಗೊಳ್ಳದ ಮನೆಮಂದಿಗೆ ಉಳ್ಳಾಲ ನಗರಸಭೆ ವತಿಯಿಂದ ಎಚ್ಚರಿಕೆ ನೋಟೀಸು ಜಾರಿ ಮಾಡಲಾಗಿದೆ.
ಕೈಕೋ, ಹಿಲೆರಿಯಾನಗರ, ಮುಕ್ಕಚ್ಚೇರಿ, ಭಾಗಗಳಲ್ಲಿ 150 ಮನೆಗಳಿದ್ದು, ಈ ಪೈಕಿ 35 ಮನೆಗಳಿಗೆ ಸೋಮವಾರದಿಂದ ಸಮುದ್ರದ ಅಲೆಗಳು ಹೊಡೆಯಲು ಆರಂಭಿಸಿತ್ತು. ಆಲಿಯಬ್ಬ , ಬೀಫಾತಿಮ್ಮ, ಮಹಮ್ಮದ್ ಎಂಬವರಿಗೆ ಸೇರಿದ ಮನೆಗಳು ಸಂಪೂರ್ಣ ಸಮುದ್ರ ಪಾಲಾಗಿದ್ದರೆ, ಉಳಿದ 35 ಮನೆಗಳಿಗೆ ಅಲೆಗಳು ಇಂದು ಕೂಡಾ ಅಪ್ಪಳಿಸುತ್ತಲಿವೆ. ಮನೆ ಅಂಗಳದಲ್ಲಿ ಸಮುದ್ರದ ನೀರು ಇಕ್ಕಟ್ಟಾಗಿ ಮನೆಯೊಳಗೂ ಹೊಕ್ಕಿದೆ. ಮನೆಗಳಲ್ಲಿ ವಾಸಿಸಲು ಯೋಗ್ಯವಿಲ್ಲದಿದ್ದರೂ, ತಹಶೀಲ್ದಾರ್ ಸೂಚಿಸಿದಂತೆ ಗಂಜಿಕೇಂದ್ರಕ್ಕೂ ಹಲವರು ಸ್ಥಳಾಂತರಗೊಂಡಿಲ್ಲ. ಈ ನಿಟ್ಟಿನಲ್ಲಿ ಅಪಾಯದಂಚಿನಲ್ಲಿದ್ದರೂ, ಸ್ಥಳಾಂತರಗೊಳ್ಳದ ಮನೆಮಂದಿಗೆ ಕೂಡಲೇ ಸ್ಥಳಾಂತರವಾಗುವಂತೆ ನಗರಸಭೆಯಿಂದ ಎಚ್ಚರಿಕೆ ನೋಟೀಸು ನೀಡಲಾಗುವುದು. ಸಂತ್ರಸ್ತರಿಗೆ ಅಂಬ್ಲಮೊಗರು ಮತ್ತು ಪಾವೂರು ಗ್ರಾಮಗಳಲ್ಲಿ ಕುಮ್ಕಿ ಸ್ಥಳವನ್ನು ಗುರುತಿಸಲಾಗಿದೆ. ಜಾಗದ ಕುರಿತ ಕಡತಗಳು ಜಿಲ್ಲಾಧಿಕಾರಿಗಳ ಕೈಯಲ್ಲಿದ್ದು, ಕುಮ್ಕಿದಾರರ ಕೈಯಿಂದ ತೆರವು ಆದ ತಕ್ಷಣ ಸ್ಥಳವನ್ನು ಮೂರು ತಿಂಗಳ ಒಳಗೆ ಪೂರೈಸಲಾಗುವುದು ಎಂದು ಉಳ್ಳಾಲದ ಗ್ರಾಮಕರಣಿಕ ಪ್ರಮೋದ್ ಹೇಳಿದ್ದಾರೆ.
ಎಡಿಬಿಯಿಂದ 237 ಕೋಟಿ ರೂ ವೆಚ್ಚದಲ್ಲಿ ಶಾಶ್ವತ ಕಾಮಗಾರಿಯ ಪೈಲೆಟ್ ಯೋಜನೆ ಕೇವಲ 2.5 ಕಿ.ಮೀ. ವ್ಯಾಪ್ತಿಯನ್ನು ಮಾತ್ರ ಸೇರಿಸಲಾಗಿದೆ. ಇನ್ನೊಂದೆಡೆ ಶಾಶ್ವತ ಕಾಮಗಾರಿಯ ಪರಿಣಾಮದಿಂದ ಕೈಕೋ ಕಿಲೇರಿಯಾನಗರ, ಸಿಗ್ರೌಂಡ್ ಪ್ರದೇಶದಲ್ಲಿ ಸಮುದ್ರ ಕೊರೆತ ಹಿಂದಿಗಿಂತಲೂ ಹೆಚ್ಚಾಗಿದೆ. ಉಳ್ಳಾಲದ ಕಾಮಗಾರಿ ಪ್ರಾರಂಭದ ಹಂತದಿಂದ ಸೋಮೇಶ್ವರ ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತ ಪ್ರಾರಂಭಗೊಂಡು ಮನೆಗಳು ಸಮುದ್ರ ಪಾಲಾಗುವಂತಾಗಿದೆ.
ಅಸಮರ್ಪಕ ಕಾಮಗಾರಿ ಮೊಗವೀರಪಟ್ಣದಲ್ಲೂ ಸಮಸ್ಯೆ : ಕಡಲ್ಕೊರೆತ ಶಾಶ್ವತ ಕಾಮಗಾರಿಯಲ್ಲಿ ಸಮುದ್ರ ಮದ್ಯದಲ್ಲಿ ಹಾಕಲಾಗಿರುವ ಎರಡು ರೀಫ್ಗಳಿಂದ ಮೊಗವೀರಪಟ್ಣದ ಮಧ್ಯಭಾಗದ ಜನರು ತೊಂದರೆ ಅನುಭವಿಸುತ್ತಿದ್ದಾರೆ. 360ಮೀ. ಉದ್ದದ ಎರಡು ರೀಫ್ಗಳನ್ನು ಸುಮಾರು 600ರಿಂದ 700 ಮೀಟರ್ಗಳ ದೂರದಲ್ಲಿ ಹಾಕಲಾಗಿದ್ದು. ಮದ್ಯ ಬರುವ 1070 ಮೀಟರ್ ಭೂ ಪ್ರದೇಶದಲ್ಲಿ ಈ ಹಿಂದಿಗಿಂತಲೂ ಎರಡು ಪಟ್ಟು ಹೆಚ್ಚು ವೇಗದಲ್ಲಿ ದಡಕ್ಕಪ್ಪಳಿಸುತ್ತಿದ್ದು, ಸುಮಾರು ೨೦ಕ್ಕೂ ಹೆಚ್ಚು ಮನೆಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್ ತಿಳಿಸಿದ್ದಾರೆ. ಜನವಸತಿ ಇರುವ ಪ್ರದೇಶವನ್ನು ಬಿಟ್ಟು ಖಾಲಿ ಪ್ರದೇಶದ ನೇರಕ್ಕೆ ರೀಫ್ ಆಳವಡಿಸಿರುವುದೇ ಸಮಸ್ಯೆಗೆ ಮುಖ್ಯ ಕಾರಣವಾಗಿದ್ದು, ಸಮುದ್ರ ತಟದಲ್ಲಿ ಹಾಕಿರುವ ಬರ್ಮ್ಸ್ ಅಸಮರ್ಪಕವಾಗಿದ್ದು ಸಮುದ್ರ ಪಾಲಾಗುತ್ತಿದೆ ಎಂದರು.