ಬಿ.ಸಿ.ರೋಡ್, ಜು 17: ಇಲ್ಲಿನ ಸರ್ವಿಸ್ ರಸ್ತೆ ಬದಿಯಲ್ಲಿ ಕಾರ್ಯಾಚರಿಸುತ್ತಿರುವ ಕಟ್ಟಡಗಳಿಗೆ ಪರಿಹಾರ ನೀಡಿಯೂ ಇನ್ನೂ ತೆರವುಗೊಳಿಸದಿರುವ ಹಿನ್ನೆಲೆ ತಕ್ಷಣವೇ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬಿ.ಸಿ.ರೋಡು ಶಾಸಕರ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಪರಿಹಾರ ನೀಡಿಯೂ ಯಾಕೆ ತೆರವುಗೊಳಿಸಲಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮುಂದಿನ ದಿನಗಳಲ್ಲಿ ಡಿಸಿ ನೇತೃತ್ವದಲ್ಲಿ ಸಭೆ ನಡೆಸಿ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದರು ಭರವಸೆ ನೀಡಿದರು. ಮೆಲ್ಕಾರ್ ರಸ್ತೆ, ಕಲ್ಲಡ್ಕ ಕಾಮಗಾರಿ, ತುಂಬೆ ತಿರುವು ರಸ್ತೆ ಹಾಗೂ ಒಳಚರಂಡಿ, ಬಿ.ಸಿ.ರೋಡ್-ಮುಕ್ಕ ರಸ್ತೆಯ ಬಗ್ಗೆ ದೂರುಗಳು ಸಭೆಯಲ್ಲಿ ಕೇಳಿಬಂದವು. ಬ್ರಹ್ಮರಕೂಟ್ಲು ಟೋಲ್ ಅವ್ಯವಸ್ಥೆಯಿಂದ ಕೂಡಿದೆ. ಈ ಬಗ್ಗೆ 15 ದಿನದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಬ್ರಹ್ಮರಕೂಟ್ಲು ಟೋಲ್ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದಾಗಿ ಸ್ಥಳೀಯರು ಎಚ್ಚರಿಸಿ, ಸಂಸದರಿಗೆ ಮನವಿ ಸಲ್ಲಿಸಿದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.