ಮಂಗಳೂರು, ಜು 17: ಶಿರಾಡಿಘಾಟ್ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ಪೂರ್ಣಗೊಂಡು ಜುಲೈ 15 ರಂದು ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ. ಆದರೆ ರಸ್ತೆ ಕಾಮಗಾರಿಯಲ್ಲಿ ಗಾರ್ಡ್ ವಾಲ್ ಹಾಗೂ ಶೋಲ್ಡರ್ ನಿರ್ಮಾಣದಂತಹ ಸಣ್ಣಪುಟ್ಟ ಕೆಲಸ ಕಾರ್ಯಗಳು ಬಾಕಿ ಇರುವುರದಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಿರಾಡಿಘಾಟ್ ನಲ್ಲಿ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಕಾಮಗಾರಿ ನಡೆಯುವ ಸಂದರ್ಭ ಘನ ವಾಹನಗಳು ಸಂಚರಿಸಿದಲ್ಲಿ ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಆದೇಶ ನೀಡಿದ್ದಾರೆ. ಜುಲೈ 18 ರಂದು ಬೆಳಿಗ್ಗೆ 6 ಗಂಟೆಯಿಂದ ಕಾಮಗಾರಿ ಮುಕ್ತಾಯಗೊಳ್ಳುವವರೆಗೆ ಶಿರಾಡಿ ಘಾಟ್ ನಲ್ಲಿ ಘನ ವಾಹನಗಳು ಸಂಚಾರ ನಡೆಸಲು ಅವಕಾಶ ಇರುವುದಿಲ್ಲ. ಕೇವಲ ಕಾರುಗಳು, ಜೀಪು, ವ್ಯಾನ್, ಮಿನಿ ವ್ಯಾನ್ ಹಾಗೂ ದ್ವಿಚಕ್ರ ವಾಹನಗಳು ಮಾತ್ರ ಸಂಚರಿಸಬಹುದಾಗಿದೆ. ಸಾಮಾನ್ಯ ಬಸ್ಸು, ರಾಜಹಂಸ, ಐರಾವತ ಬಸ್ಸುಗಳು, ಖಾಸಗಿ ಲಕ್ಸುರಿ ಬಸ್ಸು, ಬುಲೆಟ್ ಟ್ಯಾಂಕರ್ಸ್, ಷಿಪ್ ಕಾರ್ಗೋ, ಕಂಟೈನರ್ ಗಳಿಗೆ ಕಾಮಗಾರಿ ಪೂರ್ಣಗೊಳ್ಳುವ ತನಕ ನಿರ್ಬಂಧ ವಿಧಿಸಲಾಗಿದೆ.