ಬೆಳ್ತಂಗಡಿ, ಜು 17: ಮಳೆಗಾಲ ಬಂತೆಂದರೆ ಸಾಕು ಆ ಊರು ಸಂಪೂರ್ಣ ದ್ವೀಪವಾಗುತ್ತದೆ. ಹೊರ ಪ್ರಪಂಚಕ್ಕೆ ಸಂಪರ್ಕ ಕಲ್ಪಿಸುವ ಆ ಊರಿನ ಒಂದು ಕಚ್ಛಾ ರಸ್ತೆಯೂ ಮಳೆಗಾಲದಲ್ಲಿ ಹೊಳೆ ಪಾಲಾಗುತ್ತದೆ. ತಮಗೊಂದು ಸೇತುವೆ ನಿರ್ಮಿಸಿಕೊಡಿ ಎನ್ನುವ ಅಲ್ಲಿನ ಕುಗ್ರಾಮದ ಜನರ ಬೇಡಿಕೆಗೆ ಇನ್ನೂ ಮನ್ನಣೆ ಸಿಕ್ಕಿಲ್ಲ. ಆದರೆ ಇದೀಗ ಆ ಊರಿಗೆ ಯುವಕನೊಬ್ಬ ಸಂಪರ್ಕ ಕೊಂಡಿಯಾಗಿ ಪರಿಣಮಿಸಿದ್ದಾನೆ. ಆ ಊರಿನ ಜನರಿಗಾಗಿ ಈತ ತನ್ನದೇ ಆಲೋಚನೆಯ ತೂಗು ಸೇತುವೆಯೊಂದನ್ನು ನಿರ್ಮಿಸಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಗ್ರಾಮಗಳಲ್ಲಿ ಒಂದಾದ ಪೊಲಿಪು ಗ್ರಾಮದ ಕಥೆ ಇದು. ಶಿಶಿಲ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮವಿರುವುದು ದಟ್ಟ ಅರಣ್ಯಗಳ ಮಧ್ಯದಲ್ಲಿ. ಈ ಊರಿನ ಜನ ತನ್ನ ದೈನಂದಿನ ಅಗತ್ಯಕ್ಕೆ ಶಿಶಿಲ ಪೇಟೆಯನ್ನು ಸಂಪರ್ಕಿಸಬೇಕಾದರೆ, ಇಲ್ಲಿ ಹರಿಯುತ್ತಿರುವ ಪೊಲಿಪು ಹೊಳೆಯನ್ನು ದಾಟಲೇ ಬೇಕು. ಬೇಸಿಗೆ ಕಾಲದಲ್ಲಿ ಈ ಹೊಳೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವ ಕಾರಣ ಹೊಳೆಯನ್ನೇ ರಸ್ತೆಯನ್ನಾಗಿ ಗ್ರಾಮದ ಜನರು ಬಳಸುತ್ತಾರೆ. ಆದರೆ ಮಳೆಗಾಲ ಬಂದರೆ ಸಾಕು ನರಕ ಸದೃಶವಾಗುತ್ತದೆ. ಭಾರೀ ಮಳೆ ಸುರಿಯವ ಪ್ರದೇಶವಾಗಿರುವ ಕಾರಣ ಮಳೆಗಾಲದಲ್ಲಿ ತುಂಬಿ ಹರಿಯುವ ಈ ಹೊಳೆಯನ್ನು ದಾಟಲಾಗದೆ, ತನ್ನ ನಿತ್ಯ ಅಗತ್ಯಗಳಿಗೆ ಸ್ಪಂದಿಸಲಾಗದೆ ಕೈ ಕಟ್ಟಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಈ ಗ್ರಾಮಸ್ಥರದ್ದು. ಈ ಹೊಳೆಗೆ ಪುಟ್ಟದೊಂದು ಸೇತುವೆ ನಿರ್ಮಿಸಿಕೊಡುವಂತೆ ಕಳೆದ ಹಲವು ವರ್ಷಗಳಿಂದ ಈ ಭಾಗದ ಜನ ಸರಕಾರಕ್ಕೆ, ಜನಪ್ರತಿನಿಧಿಗಳಿಗೆ ನೀಡಿದ ಮನವಿಗಳಿಗೆ ಲೆಕ್ಕವಿಲ್ಲ. ಆದರೆ ಇದೀಗ ಈ ಭಾಗದ ಜನರ ಮಳೆಗಾಲದ ಸಮಸ್ಯೆಗೆ ಮುಕ್ತಿ ದೊರೆತಿದೆ. ಹೌದು ಶಿಶಿಲದ ಬಾಲಕೃಷ್ಣ ಎನ್ನುವ ಯುವಕ ಈ ಊರಿನ ಜನರಿಗೆ ಸಂಪರ್ಕ ಕೊಂಡಿಯಾಗಿ ಪರಿಣಮಿಸಿದ್ದಾನೆ. ಪೊಲಿಪು ಗ್ರಾಮದ ಜನರಿಗೆ ಹೇಗಾದರೂ ಸಹಾಯ ಮಾಡಬೇಕೆಂದು ಪಣತೊಟ್ಟ ಈ ಯುವಕನಿಗೆ ಹೊಳೆದಿದ್ದು, ತೂಗುಸೇತುವೆ ನಿರ್ಮಿಸುವ ಯೋಚನೆ. ತನ್ನ ಸ್ನೇಹಿತರನ್ನು ಸೇರಿಸಿಕೊಂಡು ತೂಗುಸೇತುವೆ ನಿರ್ಮಾಣಕ್ಕೆ ಮುಂದಾದ ಈ ಯುವಕ ಇದೀಗ ತನ್ನ ಸಾಧನೆಯಲ್ಲಿ ಯಶಸ್ವಿಯನ್ನೂ ಗಳಿಸಿದ್ದಾನೆ.
ತೂಗುಸೇತುವೆಯನ್ನು ಅತ್ಯಂತ ಸುರಕ್ಷಿತವಾಗಿ ನಿರ್ಮಿಸಿರುವ ಈ ಯುವಕ ಪೊಲಿಪು ಗ್ರಾಮದ ದ್ವೀಪದಂತಿದ್ದ ಬಾಳಿಗೆ ದಾರಿ ದೀಪವಾಗಿ ಪರಿಣಮಿಸಿದ್ದಾನೆ. ಸುಮಾರು 35 ಮೀಟರ ಅಗಲವಾಗಿ ಹರಿಯುವ ಈ ಹೊಳೆಗೆ ಈ ಭಾಗದ ಜನ ಈ ಹಿಂದೆ ಮಳೆಗಾಲದಲ್ಲಿ ಹರಸಾಹಸ ಪಟ್ಟು ಅಡಿಕೆಯ ಮರಗಳನ್ನು ಬಳಸಿ ತಾತ್ಕಾಲಿಕ ಕಾಲು ಸಂಕ ನಿರ್ಮಿಸಿಕೊಂಡು ಬರುತ್ತಿದ್ದರು. ಆದರೆ ಮಳೆ ಹೆಚ್ಚಾಗುತ್ತಿದ್ದಂತೆ ಹೊಳೆಯ ನೀರಿಗೆ ಇದು ಕೊಚ್ಚಿ ಹೋಗುತ್ತಿತ್ತು. ಆದರೆ ಇದೀಗ ಬಾಲಕೃಷ್ಣ ನಿರ್ಮಿಸಿದ ತೂಗು ಸೇತುವೆ ಈ ಭಾಗದ ಜನರಿಗೆ ಉಪಯುಕ್ತವಾಗಿದೆ. ಮಕ್ಕಳನ್ನು ಶಾಲೆಗೆ ಬಿಡಲು ಮನೆ ಮಂದಿ ಹೋಗಬೇಕಾದ ದಿನಗಳು ಕಳೆದಿದ್ದು, ಇದೀಗ ತೂಗುಸೇತುವೆಯಲ್ಲಿ ಮಕ್ಕಳು ತಾವಾಗಿಯೇ ಶಾಲೆಗೆ ಹೋಗುವಂತಾಗಿದೆ. ಗ್ರಾಮದ ಯುವಕ ಬಾಲಕೃಷ್ಣರ ಕಾರ್ಯ ಕಂಡು ಜನಪ್ರತಿನಿಧಿಗಳು ನಾಚುವಂತಾಗಿದೆ. ಯಾವುದೇ ಪ್ರತಿಫಲದ ಆಸೆಯಿಲ್ಲದೆ, ಊರಿನ ಜನರಿಗಾಗಿ ನಿಸ್ವಾರ್ಥ ಸೇವೆ ಮಾಡಿದ ಬಾಲಕೃಷ್ಣರ ಸೇವೆ ನಿಜಕ್ಕೂ ಗುರುತಿಸುವಂತಹದು.