ಬೆಂಗಳೂರು, ಜು 17: ರ್ಕಾವೇರಿ ಸಮಸ್ಯೆ ಬಗ್ಗೆ ಚರ್ಚಿಸಲು ಜುಲೈ 18 ರಂದು ಸಂಸದರ ಸಭೆ ಕರೆಯಲಾಗಿದ್ದು, ಈ ಸಭೆಗೆ ಸಂಬಂಧಿಸಿದ ಕಡತಗಳ ಜೊತೆಯಲ್ಲಿ ಸಂಸದರಿಗೆ ದುಬಾರಿ ಐಫೋನ್ ನೀಡಿರುವುದು ಸಂಸದ ರಾಜೀವ್ ಚಂದ್ರಶೇಖರ್ ಅವರ ಪತ್ರದಿಂದ ಬಹಿರಂಗಗೊಂಡಿದೆ. ಪೌರ ಕಾರ್ಮಿಕರಿಗೆ ವೇತನ , ರೈತರ ಸಾಲ ಮನ್ನಾಗೆ ಪರದಾಡುವ ಸರ್ಕಾರ, ರಾಜ್ಯದ ಸಂಸದರಿಗೆ ದುಬಾರಿ ಐ ಫೋನ್ ಮತ್ತು ಮೂಚಿ ಲೆದರ್ ಬ್ಯಾಗ್ ನ್ನು ಉಡುಗೊರೆಯನ್ನಾಗಿ ನೀಡಿದ ರಾಜ್ಯದ ಮೈತ್ರಿ ಸರ್ಕಾರದ ಈ ನಡೆ ಇದೀಗ ಬಾರೀ ಚರ್ಚೆಗೀಡು ಮಾಡಿದೆ.
ಇನ್ನೊಂದೆಡೆ ಈ ಸುದ್ದಿ ವಿವಾದವಾಗುತ್ತಿದ್ದಂತೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದು, ನಾನೇ ಸಂಸದರಿಗೆ ಗಿಫ್ಟ್ ನೀಡಿದ್ದು ಎಂದಿದ್ದಾರೆ. ತಾನು ಹೃದಯ ಶ್ರೀಮಂತಿಕೆಯಿಂದ ಸಂಸದರಿಗೆ ಗಿಫ್ಟ್ ನೀಡಿದ್ದೆ. ಆದರೆ ಅದು ಕೆಲ ಕಾಮಾಲೆ ಕಣ್ಣಿನವರಿಗೆ ಕೆಟ್ಟದಾಗಿ ಕಾಣುತ್ತದೆ ಅಷ್ಟೇ ಎಂದು ಪರೋಕ್ಷವಾಗಿ ಸಂಸದ ರಾಜೀವ್ ಚಂದ್ರಶೇಖರ್ ಅವರಿಗೆ ಟಾಂಗ್ ನೀಡಿದರು.
ಗಿಫ್ಟ್ ನೀಡಿರುವುದರ ಬಗ್ಗೆ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪೌರಕಾರ್ಮಿಕರಿಗೆ ವೇತನ ಸರಿಯಾಗಿ ದೊರಕುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಐಷಾರಾಮಿ ಗಿಫ್ಟ್ ಕೊಡಲು ಸಾರ್ವಜನಿಕರ ಹಣ ಪೋಲು ಮಾಡುವುದು ಉಚಿತವಲ್ಲ, ಹಾಗಾಗಿ ನೀವು ಗಿಫ್ಟ್ ನ್ನು ವಾಪಸ್ ನೀಡುತ್ತೇನೆ, ಸಭೆಗೆ ಹಾಜರಾಗುತ್ತಿದ್ದೇನೆ ಎಂದು ಹೇಳಿದ್ದರು.