ಉಡುಪಿ, ಫೆ.27 (DaijiworldNews/PY): ಉಡುಪಿಯ ವ್ಯಕ್ತಿಗಳ ಬ್ಯಾಂಕ್ ಖಾತೆಗಳಿಂದಲೂ ಸ್ಕಿಮ್ಮಿಂಗ್ ನಡೆಸಿ ಹಣ ಲಪಟಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ದೂರು ದಾಖಲಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಿಂಡಿಕೇಟ್ ಬ್ಯಾಂಕ್ ಉಡುಪಿಯಲ್ಲಿ ಖಾತೆ ಹೊಂದಿರುವ ಅಬ್ದುಲ್ ಫರ್ಮಾನ್, ಬ್ರಹ್ಮಾವರ ಕೊಳಲಗಿರಿ ಶಾಖೆಯ ಬ್ಯಾಂಕ್ ಆಫ್ ಬರೋಡಾದಲ್ಲಿ ಖಾತೆ ಹೊಂದಿರುವ ಸುಷ್ಮಾ, ಹಾಗೂ ಉಡುಪಿ ಕಡೆಕಾರು ಶಾಖೆಯ ಕೆನರಾ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ಮಹೇಶ್ ಸುವರ್ಣ ಅವರು ತಮ್ಮ ಹಣ ಕಳೆದುಕೊಂಡಿದ್ದಾರೆ.
ಆರೋಪಿಗಳ ಹಾಗೂ ಸೂಕ್ತವಾದ ಭದ್ರತೆ ನೀಡದ ಬ್ಯಾಂಕ್ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ನೀಡಿದ್ದಾರೆ.
ಅಬ್ದುಲ್ ಫರ್ಮಾನ್ ಅವರು ಆದಿ ಉಡುಪಿ ಶಾಖೆಯ ಸಿಂಡಿಕೇಟ್ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ಹಾಗೂ ಅದೇ ಬ್ಯಾಂಕ್ನ ಎಟಿಎಂ ಕಾರ್ಡ್ ಹೊಂದಿದ್ದಾರೆ. 2020ರ ನ.17ರಂದು ಹಣವನ್ನು, ಸುಷ್ಮಾ ಅವರ ಬ್ರಹ್ಮಾವರದ ಕೊಳಲಗಿರಿ ಶಾಖೆಯ ಬ್ಯಾಂಕ್ ಆಫ್ ಬರೋಡಾ ಖಾತೆಯಿಂದ 2021ರ ಜ.4ರಂದು 6 ಸಾವಿರ. ರೂ, ಮಹೇಶ್ ಸುವರ್ಣ ಅವರ ಕೆನರಾ ಬ್ಯಾಂಕ್ ಕಡೆಕಾರು ಶಾಖೆಯ ಖಾತೆಯಿಂದ 2020ರ ನ.18ರಂದು 33,300 ರೂ ಅನ್ನು ಸ್ಕಿಮ್ಮಿಂಗ್ ನಡೆಸಿ ವಂಚಿಸಲಾಗಿದೆ ಎನ್ನಲಾಗಿದೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.