ಉಡುಪಿ, ಸೆ 28: ತಮ್ಮೂರಿನ ರಸ್ತೆಗೆ ಆದ ಅನ್ಯಾಯವನ್ನು ಪ್ರತಿಭಟಿಸಲು ನಂದಳಿಕೆ ಗ್ರಾಮಸ್ಥರು ವಿನೂತನ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ. ನಂದಳಿಕೆಯಲ್ಲಿ ಸುಂದರವಾಗಿ ನಿರ್ಮಾಣಗೊಂಡ "ನಮ್ಮ ಗ್ರಾಮ ನಮ್ಮ ರಸ್ತೆ"ಯ ಇಕ್ಕೆಲಗಳಲಲ್ಲಿ ಸಾರ್ವಜನಿಕರೇ ಸ್ವಂತ ವೆಚ್ಚದಿಂದ ನಿರ್ಮಿಸಿದ ರಸ್ತೆ ಸಹಿತ ಚರಂಡಿಯನ್ನು ಕೇಬಲ್ ಅಳವಡಿಕೆಯ ನೆಪದಲ್ಲಿ ಬಿಎಸ್ಎನ್ಎಲ್ನವರು ಅಗೆದು ಹಾಕಿದ್ದು ಈ ಬಗ್ಗೆ ದುರಸ್ತಿ ನಡೆಸುವಂತೆ ವಿನಂತಿಸಿಕೊಂಡರೂ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತ ಪಡಿಸಿರುವ ನಂದಳಿಕೆ ಗ್ರಾಮಸ್ಥರು ಇಲಾಖೆ ತೋಡಿದ ಹೊಂಡಗಳಿಗೆ ಹೂ ಹಾಕಿ, ಸುಗಂಧಭರಿತ ಅಗರಬತ್ತಿ ಹೊತ್ತಿಸಿ, ಮಣ್ಣಿನ ಮಡಿಕೆ ಮೂಲಕ ಅಂತ್ಯಕ್ರಿಯೆಗೆ ನಾಂದಿ ಹಾಡಿ ಬೃಹತ್ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ ಮಾತನಾಡಿ, ನಮ್ಮೂರಿನ ಸುಂದರ ರಸ್ತೆಯನ್ನು ಗ್ರಾಮಸ್ಥರೇ ಖರ್ಚು ಬರಿಸಿ ನಿರ್ಮಿಸಿದ್ದು ಈ ರಸ್ತೆಯನ್ನು ಅಗೆಯುವ ಸಂದರ್ಭದಲ್ಲಿ ಯಾವುದೇ ಅನುಮತಿಯನ್ನು ಪಡೆಯದೆ ಸಂಪೂರ್ಣ ರಸ್ತೆಯನ್ನು ಕೆಡವಿ ಹಾಕುವುದು ಎಷ್ಟು ಸರಿ.? ರಸ್ತೆಯ ಇಕ್ಕೆಲಗಳನ್ನು ಯಥಾವತ್ತಾಗಿ ರಚಿಸಿ ಕೊಡಬೇಕು, ಪರಿಹಾರ ಮೊತ್ತ ಎಂದು ಬಿಡಿ ಕಾಸು ಬಿಸಾಕುವ ಅಗತ್ಯವಿಲ್ಲ ಹಿಂದೆ ಇದ್ದಂತೆ ರಸ್ತೆಯನ್ನು ನಿರ್ಮಿಸಿ ಕೊಡಿ ಇಲ್ಲದಿದ್ದರೆ ಪ್ರತಿಭಟನೆ ಉಗ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ರೇಷ್ಮಾ ಉದಯ ಶೆಟ್ಟಿ ಮಾತನಾಡಿ, ತಾನು ಈಗಾಗಲೇ ಬಿಎಸ್ಎನ್ಎಲ್ ಇಲಾಖೆಯನ್ನು ಸಂಪರ್ಕಿಸಿದ್ದು ಇಲಾಖೆಯ ವತಿಯಿಂದಲೇ 3 ತಿಂಗಳೊಳಗಾಗಿ ರಸ್ತೆಯ ಇಕ್ಕೆಲಗಲಗಳಿಗೆ ಆದ ಹಾನಿಗೆ ಪರಿಹಾರ ಮೊತ್ತವನ್ನು ನೀಡುತ್ತೇವೆ ಎಂದಿದ್ದಾರೆ. 3 ತಿಂಗಳ ಒಳಗೆ ರಸ್ತೆಯನ್ನು ನಿರ್ಮಿಸಿ ಕೊಡದಿದ್ದಲ್ಲಿ ನಂದಳಿಕೆ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಿದ್ದ ಎಂದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆದಿಂಜೆ ಸುಪ್ರಿತ್ ಶೆಟ್ಟಿ, ತಾ.ಪಂ.ಸದಸ್ಯೆ ಪುಷ್ಪಾ ಸತೀಶ್ ಪೂಜಾರಿ,ಮಾಜಿ ತಾ.ಪಂ.ಸದಸ್ಯ ಕ್ಷೇವಿಯರ್ ಡಿಮೆಲ್ಲೋ, ನಂದಳಿಕೆ ಗ್ರಾ.ಪಂ.ಸದಸ್ಯರು ಹಾಗೂ ನಂದಳಿಕೆ ಗ್ರಾಮದ ಸುಮಾರು ಇಡೀ ನಂದಳಿಕೆ ಗ್ರಾಮಸ್ಥರು ಪ್ರತಿಭಟನೆಯನ್ನು ಪಾಲ್ಗೊಂಡಿದ್ದರು.