ಮಂಗಳೂರು, ಜು 17 : ನಗರದ ಪಂಪ್ ವೆಲ್ ವೃತ್ತದ ಬಳಿ ನೂತನವಾಗಿ ನಿರ್ಮಾಣಗೊಂಡ ಇಂದಿರಾ ಕ್ಯಾಂಟೀನ್ ಗೆ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ ಖಾದರ್ ಜು 27 ರ ಮಂಗಳವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಹಸಿದವರಿಗಾಗಿ ಕಡಿಮೆ ದರದಲ್ಲಿ ಆಹಾರವನ್ನು ಒದಗಿಸುವ ಇಂದಿರಾ ಕ್ಯಾಂಟೀನ್ ಎಲ್ಲರ ಮೆಚ್ಚುಗೆ ಪಾತ್ರವಾಗಿದೆ. ಮಂಗಳೂರಿನಲ್ಲಿ ಇದು 5 ನೇಯ ಇಂದಿರಾ ಕ್ಯಾಂಟೀನ್ ಆಗಿದ್ದು , ಅತ್ಯಂತ ಕಡಿಮೆ ವೆಚ್ಚದಲ್ಲಿ ದೊರಕುವ ಆಹಾರವು ಆಟೋ ಚಾಲಕರಿಗೆ, ಕೂಲಿ ಕೆಲಸಗಾರರಿಗೆ, ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದೆ ಎಂದು ತಿಳಿಸಿದರು.
ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ಆಗಮಿಸುವ ಹೆಚ್ಚಿನ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಿಂದ ಬರುತ್ತಿದ್ದು, ಆರ್ಥಿಕ ಬಿಕ್ಕಟ್ಟಿ ಹೊಂದಿರುವ ವಿದ್ಯಾರ್ಥಿಗಳಿಗೆ ಇಂದಿರಾ ಕ್ಯಾಂಟೀನ್ ನಿಂದ ಅನುಕೂಲಕರವಾಗಿದೆ.ಹಸಿದವರಿಗಾಗಿ ಕಡಿಮೆ ದರದಲ್ಲಿ ಅನ್ನವನ್ನ ನೀಡುವ ಮೂಲಕ ಮಧ್ಯಮ ವರ್ಗದವರ ಮೆಚ್ಚುಗೆ ಇಂದಿರಾ ಕ್ಯಾಂಟೀನ್ ಪಾತ್ರವಾಗಿದೆ ಎಂದು ಹೇಳಿದರು.
ಜನರು ಇಂದಿರಾ ಕ್ಯಾಂಟೀನ್ ನಂತಹ ಉತ್ತಮ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪಂಪ್ ವೆಲ್ ನಲ್ಲಿನ ಕ್ಯಾಂಟೀನ್ ಗೂ ಉತ್ತಮ ಸ್ಪಂದನೆ ಸಿಗುವ ಭರವಸೆ ಇದೆ ಎಂದರು . ಸ್ಟೇಟ್ ಬ್ಯಾಂಕ್, ಕಾವೂರು, ಉರ್ವ ಸ್ಟೋರ್, ಸುರತ್ಕಲ್ ಹಾಗೂ ಪಂಪ್ ವೆಲ್ ನಲ್ಲಿ ಇಂದಿರಾ ಕ್ಯಾಂಟೀನ್ ಈಗಾಗಲೇ ಉದ್ಘಾಟನೆಗೊಂಡಿದ್ದು, ಶೀಘ್ರದಲ್ಲೇ, ಉಳ್ಳಾಲ, ಬೆಳ್ತಂಗಡಿ, ಬಿ.ಸಿ ರೋಡ್, ಸುಳ್ಯ ಹಾಗೂ ಪುತ್ತೂರಿನಲ್ಲಿಯೂ ಕಾರ್ಯಾರಂಭಿಸುವ ಭರವಸೆಯನ್ನು ಸಚಿವರು ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮೇಯರ್ ಭಾಸ್ಕರ್ ಮೊಯಿಲಿ, ಉಪ ಮೇಯರ್ ಮೊಹಮ್ಮದ್, ಕಾರ್ಪೊರೇಟರ್ ನವೀನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.