ಕಾರ್ಕಳ, ಜು 17: ಇಲ್ಲಿನ ಕುಕ್ಕುಂದೂರು ಅಯ್ಯಪ್ಪ ನಗರದ ಕೆರ್ತಾಡಿಯ ಮನೆಯಲ್ಲಿ ವಾಸ್ತವ್ಯ ಇದ್ದ ಮಹಿಳೆ ಫ್ಲೋರಿನಾ ಮಚೋಡಾ ಅಲಿಯಾಸ್ ಫ್ಲೋರಿನಾ ಡಿಸೋಜಾ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ಸು ಆಗಿದ್ದಾರೆ.
ಮೂಲತಃ ಹೊಸ್ಮಾರ್ ನಿವಾಸಿಯಾಗಿದ್ದು, ಪ್ರಸ್ತುತ ಉಳ್ಳಾಲದಲ್ಲಿರುವ ಪತ್ನಿಯ ಮನೆಯಲ್ಲಿ ವಾಸ್ತವ್ಯ ಇದ್ದ ಮಹಮ್ಮದ್ ರಿಯಾಸ್(33) ಬಂಧಿತ ಆರೋಪಿ. ಜು. 8ರಂದು ಆರೋಪಿ ಈ ಕೃತ್ಯ ಎಸಗಿ ರಾಜಸ್ಥಾನದ ಅಜ್ಮೀರ್ ದರ್ಗಾ ದರ್ಶನಗೈದು ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಪಡೆದ ಕಾರ್ಕಳ ವೃತ್ತ ನಿರೀಕ್ಷಕ ಜಾಯ್ ಅಂತೋನಿ ನೇತೃತ್ವದ ಪೊಲೀಸರ ತಂಡವು ಮುಂಬಯಿಯಲ್ಲಿ ಬಂಧಿಸಿ ಕಾರ್ಕಳಕ್ಕೆ ಕರೆದುಕೊಂಡು ಬಂದಿದ್ದಾರೆ. ಯುಎಇಯಲ್ಲಿ ಕೇಬಲ್ ವ್ಯವಹಾರ ನಡೆಸುತ್ತಿದ್ದ ಮಹಮ್ಮದ್ ರಿಯಾಸ್ ಕಳೆದ ಕೆಲವು ವರ್ಷಗಳ ಹಿಂದೆ ಊರಿಗೆ ಹಿಂತಿರುಗಿದ. ಆ ಸಂದರ್ಭದಲ್ಲಿ ಫೇಸ್ಬುಕ್ ಮೂಲಕ ಫ್ಲೋರಿನಾ ಮಚೋಡಾ ಅಲಿಯಾಸ್ ಫ್ಲೋರಿನಾ ಡಿಸೋಜಾ ಪರಿಚಯವಾಗಿತ್ತು. ಪತಿಯಿಂದ ದೂರ ಉಳಿದಿದ್ದ ಫ್ಲೋರಿನಾಳ ಕುರಿತಂತೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದ ಮಹಮ್ಮದ್ ರಿಯಾಸ್, ಆಕೆಗೆ ಹಲವು ರೀತಿಯಲ್ಲಿ ನೆರವು ನೀಡುವ ಮೂಲಕ ಮನ ಗೆಲ್ಲುವಲ್ಲಿ ಸಫಲನಾಗಿದ್ದ. ಈ ಎಲ್ಲಾ ಬೆಳವಣಿಗೆಯ ನಡುವೆ ಮಹಮ್ಮದ್ ರಿಯಾಸ್ ತನ್ನಲ್ಲಿದ್ದ ಹಾಗೂ ಚಿಟ್ ಫಂಡ್ನಿಂದ ಪಡೆದುಕೊಂಡ ಒಟ್ಟು 13 ಲಕ್ಷ ನಗದನ್ನು ಫ್ಲೋರಿನಾಳಿಗೆ ಒಪ್ಪಿಸಿದನೆಂಬ ಮಾಹಿತಿ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.