ಬೆಂಗಳೂರು, ಜು14: ನನಗೆ ಸ್ವಲ್ಪ ಸಮಯ ಕೊಡಿ, ನಾನು ಸಿಎಂ ಆಗಿ ಕೇವಲ ಎರಡು ತಿಂಗಳು ಆಗಿದೆ. ನಾನು ಯಾರಿಗೂ ಮೋಸ ಮಾಡಲು ಸಿಎಂ ಆಗಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಿರುವವರೆಗೂ ಬಡವರ ಪರ ಇರುತ್ತೇನೆ. ನನಗೆ ಸ್ವಲ್ಪ ಸಮಯ ಕೊಡಿ, ನಾನು ಸಿಎಂ ಆಗಿ ಕೇವಲ ಎರಡು ತಿಂಗಳು ಆಗಿದೆ. ನಾನು ಯಾರಿಗೂ ಮೋಸ ಮಾಡಲು ಸಿಎಂ ಆಗಿಲ್ಲ. ನಾನು ಕೇವಲ ರಾಮನಗರದ ಸಿಎಂ ಅಲ್ಲ, ಇಡೀ ರಾಜ್ಯದ ಸಿಎಂ. ಎಲ್ಲಾ ಜಿಲ್ಲೆಗಳು ನನ್ನ ಜಿಲ್ಲೆಯೇ ಆಗಿದೆ. ಟೀಕೆ ಮಾಡುವುದನ್ನು ನಿಲ್ಲಿಸಿ, ಸ್ವಲ್ಪ ಸಮಯ ನೀಡಿ ಎಂದು ವಿನಂತಿಸಿಕೊಂಡಿದ್ದಾರೆ.
ರೈತರ ಸಾಲಮನ್ನಾ ವಿಚಾರದಲ್ಲಿ ನಾನು ತಮಾಷೆ ಮಾಡುತ್ತಿಲ್ಲ. ಇದನ್ನು ನಾನು ಸವಾಲಾಗಿ ಆಗಿ ಸ್ವೀಕಾರ ಮಾಡಿದ್ದೇನೆ. ರೈತರಿಗೆ ಅನುಕೂಲ ಮಾಡುತ್ತಿರುವವನಿಗೆ ಹೀಗೆಲ್ಲ ಮಾಡುವುದು ಸರಿಯಲ್ಲ. ನನಗೆ ರೈತರ ಸಾಲಮನ್ನಾದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.
ಪೆಟ್ರೋಲ್ ದರ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪೆಟ್ರೋಲ್ ಡೀಸೆಲ್ ಬೆಲೆಯನ್ನು ಕೇವಲ ಒಂದು ರೂಪಾಯಿ ಹೆಚ್ಚಿಸಿದ್ದಕ್ಕೆ ಮಂಗಳೂರಿನ ಮೀನುಗಾರ ಮಹಿಳೆಯರ ಬಳಿ ಕುಮಾರಸ್ವಾಮಿ ಈಸ್ ನಾಟ್ ಅವರ್ ಸಿಎಂ ಎಂದು ಹೇಳಿಸುತ್ತಿದ್ದೀರಿ. ನನ್ನ ಮೇಲೆ ನಿಮಗೆ ಯಾಕೆ ಇಷ್ಟು ಕೋಪ..? ಈ ಹಿಂದೆ ಮೋದಿಯವರು ಹನ್ನೊಂದು ಬಾರಿ ಇಂಧನದ ಬೆಲೆ ಏರಿಕೆ ಮಾಡಿದ್ದರು. ಆದರೂ ಅವರ ವಿರುದ್ಧ ನೀವು ಸಣ್ಣ ಚಕಾರ ಕೂಡ ಎತ್ತಿಲ್ಲ. ಎಷ್ಟು ದಿನ ಅಂತಾ ನೀವು ನನ್ನ ವಿರುದ್ಧ ಜನರನ್ನು ಎತ್ತಿಕಟ್ಟುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಜನರ ಮಧ್ಯೆ ಕಂದಕ ಸೃಷ್ಟಿ ಮಾಡಿ ಅನುಮಾನ ಮೂಡಿಸಬೇಡಿ. ನಿಮಗೆ ನನ್ನ ಮೇಲೆ ಯಾಕೆ ಅನುಮಾನ. ಅನುಮಾನ ಇದ್ದರೆ ನಿಮ್ಮ ವ್ಯವಸ್ಥಾಪಕರೇ ಚರ್ಚೆಗೆ ಬರಲಿ, ನಾನು ಚರ್ಚೆಗೆ ಸಿದ್ಧನಿದ್ದೇನೆ. ತಪ್ಪು ಮಾಡದೇ ಇದ್ದರೂ, ಸುಮ್ಮನೆ ಮಾತನಾಡುತ್ತೀರಿ. ಅಲ್ಲದೇ ನಾನೇದರೂ ತಪ್ಪು ಮಾಡಿದ್ದರೆ, ಬಂದು ನನ್ನ ಜೊತೆ ಚರ್ಚೆ ಮಾಡಿ. ಸುಮ್ಮನೆ ಸುದ್ದಿ ಮಾಡಬೇಡಿ. ಸುಮ್ಮನೆ ಅಪಪ್ರಚಾರ ಮಾಡಬೇಡಿ ಎಂದು ಹೇಳಿದ್ದಾರೆ.