ಉಡುಪಿ, ಜು14: ಮಲ್ಪೆ ಬೀಚಿನಲ್ಲಿ ಪ್ರವಾಸಿಗರ ಕಣ್ಮನ ಸೆಳೆಯುತ್ತಿದ್ದ ಬಾಹುಬಲಿ ಹೆಸರಿನ ಗಂಡು ಒಂಟೆ, ಇದ್ದಕ್ಕಿದ್ದಂತೆ ಬಿದ್ದು ಸಾವನ್ನಪ್ಪಿದ್ದೆ ಎಂದು ತಿಳಿದುಬಂದಿದೆ.
ಮಧ್ಯಪದ್ರೇಶ ರಾಜ್ಯದ ಬಡಲಾನಿ ಜಿಲ್ಲೆಯ ಶತ್ರುಘ್ನ ಬಾಬುರಾವ್ ಎಂಬುವವರು ಕಳೆದ 10 ವರ್ಷಗಳಿಂದ ಒಂಟೆ ಸವಾರಿಗಾಗಿ ಮೂರು ಗಂಡು ಒಂಟೆಗಳನ್ನು ಮಲ್ಪೆ ಬೀಚಿನಲ್ಲಿ ವ್ಯವಸ್ಥೆಗೊಳಿಸಿದ್ದರು. ಕಟ್ಟಪ್ಪ (14), ಬಾಹುಬಲಿ (10), ರಾಣಾ(8) ಹೆಸರಿನ ಮೂರು ಒಂಟೆಗಳು ಬೀಚಿನಲ್ಲಿ ಸೇರುವ ಪ್ರವಾಸಿಗರನ್ನು ಬೆನ್ನ ಮೇಲೆ ಹೊತ್ತು, ಕಡಲ ತಡಿಯ ಮರಳ ರಾಶಿಯಲ್ಲಿ ಸುತ್ತಾಡಿಸುತ್ತಿದ್ದವು.
ಅದರಲ್ಲಿ ಶುಕ್ರವಾರ ಮಧ್ಯಾಹ್ನ ಗಿಡ-ಗಂಟಿ ಬೆಳೆದ ಜಾಗದಲ್ಲಿ ಮೇಯಲು ಬಿಟ್ಟಿದ ಬಾಹುಬಲಿ ಹೆಸರಿನ 10 ವರ್ಷದ ಒಂಟೆ ಇದ್ದಕ್ಕಿದ್ದಂತೆ ಬಿದ್ದು ಒದ್ದಾಡಿ ಸಾವನ್ನಪ್ಪಿದ್ದೆ. ಒಂಟೆಯ ಮಾಲಿಕ ಶತ್ರುಘ್ನ ಬಾಬುರಾವ್ ಒಂಟೆ ಸಾವಿಗೆ ಹೃದಯಘಾತ ಕಾರಣ ಇರಬಹುದೆಂದು ಅಭಿಪ್ರಾಯಪಟ್ಟಿದ್ದಾರೆ.
ಸುಮಾರು 900 ಕೆಜಿ ಭಾರದ, 7 ಅಡಿ ಎತ್ತರದ, ಒಂಟೆಯ ಕಳೇಬರವನ್ನು ವಿಲೇವಾರಿಗೊಳಿಸಲು ಮಾಲಿಕ ಶುತ್ರಘ್ನನಿಗೆ ಸಮಸ್ಯೆ ಎದುರಾಗಿದೆ. ಒಂದೆಡೆ ಆತನ ಕುಟುಂಬದ ಸಂಸಾರ ರಥ ಸಾಗಿಸಲು ನೆರವಾಗುತ್ತಿದ್ದ ಒಂಟೆ ಬಾಹುಬಲಿಯ ಸಾವು ದುಃಖಿತಗೊಳಿಸಿದೆ. ದಿಕ್ಕು ಕಾಣದೆ ಅಸಹಾಯಕ ಸ್ಥಿತಿಯಲ್ಲಿದ್ದ ಶತ್ರುಘ್ನನ ನೆರವಿಗೆ ಉಡುಪಿಯ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಹಾಗೂ ಸ್ಥಳಿಯರಾದ ಗಣೇಶ್ ಮೆಂಡನ್, ಮಂಜುನಾಥ್, ದಯಾನಂದ ಕೊಳ ನೆರವಿಗೆ ಬಂದಿದ್ದಾರೆ. ದುಃಖಿತ ಒಂಟೆ ಮಾಲಿಕನಿಗೆ ಸಾಂತ್ವನ ಹೇಳಿದ್ದಾರೆ. ಮಾತ್ರವಲ್ಲ, ಕಳೇಬರದ ವಿಲೇವಾರಿಗೊಳಿಸುವ ವ್ಯವಸ್ಥೆ ಮಾಡಿದ್ದಾರೆ.
ಮುಂದಾಳತ್ವ ವಹಿಸಿದ ನಿತ್ಯಾನಂದ ಒಳಕಾಡು ಅವರು ನಗರಸಭೆಗೆ ಮಾಹಿತಿ ನೀಡಿ. ಕಳೇಬರದ ಸಾಗಟಕ್ಕೆ ಲಾರಿಯನ್ನು ತರಿಸಿದ್ದಾರೆ. ಕ್ರೇನ್ ಮೂಲಕ ಒಂಟೆಯ ಕಳೇಬರವನ್ನು ಲಾರಿಗೆ ತುಂಬಿಸುವ ವ್ಯವಸ್ಥೆಗೊಳಿಸಿದ್ದಾರೆ. ನಂತರ ಸಾಮಾಜಿಕ ಕಾರ್ಯಕರ್ತರು ಕಳೇಬರಕ್ಕೆ ಹೂ ಹಾರ ಹಾಕಿ, ಅಂತಿಮ ನಮನ ಸಮರ್ಪಿಸಿ ನಗರ ಸಭೆಯ ಸ್ವಚ್ಚತಾ ಸಿಬ್ಬಂದಿಗೆ ಹಸ್ತಾಂತರಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತರ ತಕ್ಷಣದ ಸ್ಪಂದನೆಗೆ, ಸ್ಥಳಿಯ ಸಾರ್ವಜನಿಕ ವಲಯದಲ್ಲಿ ಹರ್ಷ ವ್ಯಕ್ತವಾಯಿತು. ಉಡುಪಿಯಲ್ಲಿ ಒಂಟೆ ಸಾವು ಪ್ರಥಮ ಪ್ರಕರಣ ಎಂದು ಸಾರ್ವಜನಿಕರ ಅಭಿಪ್ರಾಯ ವ್ಯಕ್ತವಾಗಿದೆ. ಹತ್ತು ತಿಂಗಳ ಹಿಂದೆ ಬಾಹುಬಲಿ ಒಂಟೆಗೆ ಒಂದು ಲಕ್ಷದ ಇಪ್ಪತ್ತು ಸಾವಿರ ಹಣ ಕೊಟ್ಟು ಮಧ್ಯಪ್ರದೇಶದಲ್ಲಿ ಖರೀದಿಸಿದ್ದೆ ಎಂದು ಮಾಲಿಕ ಶತ್ರುಘ್ನ ಹೇಳಿದ್ದಾರೆ.