ಮಂಗಳೂರು, ಜು14: ನಗರದ ಸೋಮೆಶ್ವರ ಉಚ್ಚಿಲ ಭಾಗದಲ್ಲಿ ಕಡಲ್ಕೊರೆತ ಬಿರುಸು ಪಡೆದಿದ್ದು, ಸುಮಾರು 50ರಷ್ಟು ತೆಂಗು ಹಾಗೂ ಇತರೆ ಮರಗಳು ಸಮುದ್ರಪಾಲಾಗಿದೆ.
ತೀವ್ರಗೊಂಡ ಕಡಲ್ಕೊರೆತದಿಂದ ಉಚ್ಚಿಲ ಉಳ್ಳಾಲ ಸಂಪರ್ಕಿಸುವ ರಸ್ತೆಗೂ ಸಮುದ್ರದ ಅಲೆಗಳು ಹೊಡೆಯಲು ಆರಂಭಿಸಿದೆ. ಪರಿಣಾಮ ಸಾರ್ವಜನಿಕ ರಸ್ತೆಯ ಜೊತೆಗೆ ಸಮುದ್ರ ತೀರದ ಹಲವು ಮನೆಗಳು ಅಪಾಯದಂಚಿಗೆ ಸಿಲುಕಿದೆ. ಉಚ್ಚಿಲ, ಸೀರೋಡ್, ಬೆಟ್ಟಂಪಾಡಿ, ಪೆರಿಬೈಲು ಪ್ರದೇಶದಲ್ಲಿ ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸಲು ಆರಂಭವಾಗಿದೆ. ಗುರುವಾರ ತಡರಾತ್ರಿಯಿಂದ ಸಮುದ್ರದ ಅಲೆಗಳ ಆರ್ಭಟ ಹೆಚ್ಚಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬೆಟ್ಟಂಪಾಡಿ ಪ್ರದೇಶದಲ್ಲಿರುವ ತೆಂಗಿನ ಮರಗಳು ಸಮುದ್ರಪಾಲಾದರೆ, ಪೆರಿಬೈಲು ಸಮೀಪ ಹಲವು ವರ್ಷಗಳ ಹಿಂದಿನ ಪ್ರವಾಸಿಗರು ಕುಳಿತುಕೊಳ್ಳುವ ತಡೆಗೋಡೆಯೊಂದು ಸಂಪೂರ್ಣ ಕುಸಿದುಬಿದ್ದಿದೆ. ಇದೇ ಪ್ರದೇಶದಲ್ಲಿ ರಾತ್ರಿ ಮತ್ತು ಮಧ್ಯಾಹ್ನ ವೇಳೆ ಸಮುದ್ರದ ಅಲೆಗಳು ರಸ್ತೆಗೆ ಅಪ್ಪಳಿಸಲು ಆರಂಭಿಸಿದ್ದು, ಇದರಿಂದ ಉಚ್ಚಿಲದಿಂದ ಉಳ್ಳಾಲ ಕಡೆಗೆ ವಾಹನ ಸವಾರರು ತೆರಳಲು ಸಾಧ್ಯವಾಗುತ್ತಿಲ್ಲ. ಕಡಲ್ಕೊರೆತ ಸಂದರ್ಭ ಪೆರಿಬೈಲಿನಲ್ಲಿ ಪ್ರತಿವರ್ಷವೂ ದುರಂತಗಳು ಸಂಭವಿಸುತ್ತಲೇ ಇದೆ. ಆದರೆ ಇದಕ್ಕೆ ಯಾವುದೇ ರೀತಿಯ ಶಾಶ್ವತ ಪರಿಹಾರ ಸಿಕ್ಕಿಲ್ಲ. ಪರಿಣಾಮ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.