ಟಂಪೆರ್, ಜು14: ವಿಶ್ವ ಜೂನಿಯರ್ ಚಾಂಪಿಯನ್ಷಿಪ್ನ ಮಹಿಳೆಯರ 400 ಮೀಟರ್ ಓಟದಲ್ಲಿ ಸ್ವರ್ಣ ಜಯಿಸಿ ಇತಿಹಾಸ ಬರೆದ ಹಿಮಾ ದಾಸ್ ರಾಷ್ಟ್ರಗೀತೆ ಮೊಳಗಿದಾಗ ಭಾವುಕರಾದರು.
ಸ್ಪರ್ಧೆಯ ನಂತರ ಚಿನ್ನದ ಪದಕ ಕೊರಳಿಗೇರಿಸಿಕೊಂಡ ಹಿಮಾ ಭಾರತದ ರಾಷ್ಟ್ರಗೀತೆ ಕೇಳಿ ಆನಂದದಿಂದ ಕಣ್ಣೀರು ಹಾಕಿದ್ದಾರೆ. ಭಾರತದ ರಾಷ್ಟ್ರಗೀತೆ ನನ್ನಿಂದ ಬೇರೆ ನೆಲದಲ್ಲಿ ಮೊಳಗಬೇಕು ಎಂಬುದು ನನ್ನ ಕನಸಾಗಿತ್ತು, ಅದಿಂದು ಸಾರ್ಥಕಗೊಂಡಿದೆ ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ.
ಕೇವಲ 0.4 ಎಕರೆ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ಸಣ್ಣ ರೈತ ರಂಜಿತ್ ದಾಸ್ ಮತ್ತು ಗೃಹಿಣಿ ಜುನಾಲಿ ಮಗಳಾಗಿರುವ ಹಿಮಾ, ಬಡತನದ ನಡುವೆ ಐತಿಹಾಸಿಕ ಸಾಧನೆ ತೋರಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ನಾಲ್ವರು ಮಕ್ಕಳಲ್ಲಿ ಹಿಮಾ ಹಿರಿಯವಳಾಗಿದ್ದು, ಇಬ್ಬರು ತಂಗಿ ಮತ್ತು ಓರ್ವ ತಮ್ಮನನ್ನು ಹೊಂದಿದ್ದಾರೆ. ಧಿಂಗ್ನಲ್ಲಿ 12ನೇ ತರಗತಿ ವಿದ್ಯಾರ್ಥಿನಿಯಾಗಿರುವ ಹಿಮಾ, ಅಥ್ಲೀಟ್ ಆಗುವುದಕ್ಕೆ ಮುನ್ನ ಫುಟ್ಬಾಲ್ ಆಟಗಾರ್ತಿಯಾಗಿದ್ದರು.
ಗುರುವಾರ ರಾತ್ರಿ ನಡೆದ ಐಎಎಎಫ್ ವಿಶ್ವ 20 ವಯೋಮಿತಿ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ ಮಹಿಳೆಯರ 400 ಮೀ. ಓಟವನ್ನು 51.46 ಸೆಕೆಂಡ್ಗಳಲ್ಲಿ ಪೂರೈಸಿದ 18 ವರ್ಷದ ಹಿಮಾ ಚಿನ್ನದ ಪದಕ ಗೆದ್ದುಕೊಂಡರು. ಇದರೊಂದಿಗೆ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ನಲ್ಲಿ ಸ್ವರ್ಣ ಗೆದ್ದ ಭಾರತದ 2ನೇ ಹಾಗೂ ಜಾಗತಿಕ ಕ್ರೀಡಾಕೂಟದ ಟ್ರಾಯಕ್ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎನಿಸಿಕೊಂಡಿದ್ದಾರೆ.
ಇದೀಗ ಹಿಮಾ ದಾಸ್ ಸಾಧನೆಗೆ ದೇಶದ ಮೂಲೆ ಮೂಲೆಗಳಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ.