ಕುಂದಾಪುರ, ಜು 13: ಅಪ್ರಾಪ್ತೆಯನ್ನು ಪುಸಲಾಯಿಸಿ ಅತ್ಯಾಚಾರ ನಡೆಸಿ ಗರ್ಭಿಣಿಯನ್ನಾಗಿ ಮಾಡಿದ ಘಟನೆ ಕುಂದಾಪುರ ತಾಲೂಕಿನ ಕಾಳಾವರ ಗ್ರಾಮದ ಕಕ್ಕೇರಿ ಎಂಬಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸ್ಥಳೀಯ ನಿವಾಸಿ ಅಪ್ರಾಪ್ತೆ ಅತ್ಯಾಚಾರಕ್ಕೊಳಗಾದವಳು. ನೆರೆಮನೆಯ ನಾಗೇಶ್ ಪೂಜಾರಿ ಎಂಬಾತ ಅತ್ಯಾಚಾರ ನಡೆಸಿದ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಹಿಂದೆ ಐಸ್ ಕ್ರಿಂ ಮಾರಿಕೊಂಡಿದ್ದ ಆರೋಪಿ ನಂತರ ಕೂಲಿ ಕೆಲಸ ಮಾಡಿಕೊಂಡಿದ್ದು, ಕಳೆದ ಆರು ತಿಂಗಳಿನಿಂದ ನಿರಂತರ ಅತ್ಯಾಚಾರ ನಡೆಸಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಾಳೆ. ವಿಷಯ ತಿಳಿದ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಮೋಹನಚಂದ್ರ ಕಾಳಾವರ ಅವರು ಉಡುಪಿಯ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ನೀಡಿದ್ದು ಮಕ್ಕಳ ರಕ್ಷಣಾ ಘಟಕ ಬಾಲಕಿಯ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಆರೋಪಿ ನಾಗೇಶ್ ಪೂಜಾರಿಯನ್ನು ಬಂಧಿಸಿ ಮುಂದಿನ ಕ್ರಮಕ್ಕಾಗಿ ಉಡುಪಿಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.