ವಿಟ್ಲ, ಜು 13 : ಕೇರಳದ ಅಕ್ರಮ ಕಸಾಯಿಖಾನೆಗಳಿಂದ ಮಾಂಸ ತ್ಯಾಜ್ಯವನ್ನು ತಂದು ನಿರ್ಜನ ಪ್ರದೇಶದ ರಸ್ತೆಗಳಲ್ಲಿ ಸುರಿಯುತ್ತಿದ್ದ ತಂಡ ವಾಹನ ಸಹಿತವಾಗಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದು ಬಳಿಕ ವಿಟ್ಲ ಪೊಲೀಸರ ಅತಿಥಿಯಾದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಪುತ್ತೂರು ವಳಮೊಗರು ಗ್ರಾಮದ ಆಜ್ಜಿಕಲ್ಲು ನಿವಾಸಿ ಮಹಮ್ಮದ್ ರಫೀಕ್ (30), ಕೇರಳದ ಕೋಯಿಕ್ಕೋಡ್ ನಿವಾಸಿ ಅಹಮ್ಮದ್ ಗಜನಿ (34), ಮಲಪರಂಬ ತಿರೂರನ್ನಾಳಿ ನಿವಾಸಿ ಸೌಫಿ(30), ಕೋಝಿಕೋಡ್ ಬೇಪೂರ್ ನಿವಾಸಿ ಮಸೂದ್ (25), ಬಿಹಾರ ಬಾಕಾ ನಿವಾಸಿ ಮಹಮ್ಮದ್ ಜಿಯಾವುಲ್ ಅನ್ಸಾರಿ (20) ಬಂಧಿತ ಆರೋಪಿಗಳಾಗಿದ್ದಾರೆ.
ಸಾರಡ್ಕ ಚೆಕ್ ಪೋಸ್ಟ್ ನಲ್ಲಿ ವಾಹನ ತಾಪಾಸಣೆ ನಡೆಸುತ್ತಿದ್ದ ವಿಟ್ಲ ಪೊಲೀಸರಿಗೆ ಲಾರಿಯೊಂದು ದುರ್ನಾತ ಬೀರುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ಮತ್ತಷ್ಟು ಮಾಹಿತಿಯನ್ನು ಪಡೆಯುವ ಸಮಯದಲ್ಲಿ ಇರ್ದೆ ಭಾಗದಲ್ಲಿ ಮಾಂಸ ತ್ಯಾಜ್ಯ ವಿಲೇವಾರಿಗೆ ಬಂದಿದ್ದು, ಅಲ್ಲಿನ ಜನರು ಅಲ್ಲಿಂದ ಓಡಿಸಿದ ಹಿನ್ನಲೆಯಲ್ಲಿ ಬೇರೆಡೆ ವಿಲೇವಾರಿ ನಡೆಸಿರುವ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಲಾರಿಯನ್ನು ವಶಕ್ಕೆ ಪಡೆಯುತ್ತಿದ್ದಂತೆ ಅವರ ಬೆಂಗಾವಲು ಪಡೆಯಂತೆ ಇದ್ದ ಕಾರಿನವರೂ ಮಾತಿಗೆ ಇಳಿದಿದ್ದು, ಅವರ ಕಡೆಯವರೇ ಎಂಬ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ. ಕಾರನ್ನೂ ವಶಕ್ಕೆ ಪಡೆದುಕೊಂಡ ವಿಟ್ಲ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ ಸಮಯದಲ್ಲಿ ಹಲವು ದಿನಗಳಿಂದ ವಿಟ್ಲ ಆಸುಪಾಸಿನ ಗ್ರಾಮಗಳ ರಸ್ತೆ ಬದಿಯಲ್ಲಿ ಅಕ್ರಮವಾಗಿ ತ್ಯಾಜ್ಯ ವಿಲೇವಾರಿ ಮಾಡಿರುವುದನ್ನು ಬಾಯಿ ಬಿಟ್ಟಿದ್ದಾರೆ.ಅಳಿಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿನ್ನಪ್ಪ ಗೌಡ ಅವರು ನೀಡಿದ ದೂರಿನ ಪ್ರಕಾರ ವಿಟ್ಲ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಆರೋಪಿಗಳೂ ಇವರೇ ಎಂಬುದು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಐವರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ದ ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಸಿ ಡಿ ನಾಗರಾಜ್ ಅವರ ನಿರ್ದೇಶನದಂತೆ ವಿಟ್ಲ ಠಾಣೆಯ ರವೀಶ್, ಸಿಬ್ಬಂದಿಗಳಾದ ಜಯಕುಮಾರ್, ಲೋಕೇಶ್, ಅನುಕುಮಾರ್, ಅಭಿಜಿತ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.