ಮಂಗಳೂರು, ಜು13: ಗೋಸ್ವರ್ಗ ನಮ್ಮ ಸ್ವಂತ ಹಕ್ಕಲ್ಲ, ಇದು ಇಡೀ ಸಮಾಜಕ್ಕೆ ಸೇರಿದ್ದರಿಂದ ಪ್ರಥಮ ಗೋಸ್ವರ್ಗವನ್ನು ಎಲ್ಲರೂ ಸೇರಿ ಕಟ್ಟೋಣ. ಈ ಗೋಸ್ವರ್ಗಕ್ಕೆ ಎಲ್ಲರ ಸೇವೆ ಸಲ್ಲಬೇಕು ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಹೇಳಿದ್ದಾರೆ.
ನಗರದಲ್ಲಿ ಸ್ವರ್ಗ ಸಂವಾದ ಮತ್ತು ಗೋಸಂಪದ ಸಮರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ರಾಘವೇಶ್ವರ ಶ್ರೀಗಳು ಮಾತನಾಡಿದರು. ಗೋಸ್ವರ್ಗವನ್ನು ವೀಕ್ಷಿಸಿದ ಪ್ರತಿಯೊಬ್ಬರಿಗೂ ಗೋಸಂರಕ್ಷಣೆಗೆ ಸ್ಫೂರ್ತಿ ದೊರಕಬೇಕು ಎನ್ನುವುದೇ ಗೋಸ್ವರ್ಗದ ಆಶಯ. ಗೋವು ನಮ್ಮ ತಾಯಿ. ಆದರೆ ನಮ್ಮ ತಾಯಿ ಮಾತ್ರವಲ್ಲ, ನಿಮ್ಮೆಲ್ಲರ ತಾಯಿ ಕೂಡಾ ಹೌದು. ಪ್ರತಿಯೊಬ್ಬರಿಗೂ ತಾಯಿಯ ಸೇವೆಗೆ ಅವಕಾಶ ನೀಡಬೇಕು ಎನ್ನುವ ಸಲುವಾಗಿ ಪ್ರತಿಯೊಬ್ಬರಿಗೂ ಸೇವೆಯ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಈ ಬಾರಿಯ ಗೋಸ್ವರ್ಗ ಚಾತುರ್ಮಾಸ್ಯಕ್ಕೆ ಆಗಮಿಸಿದ ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಗೋಸ್ವರ್ಗಕ್ಕೆ ವಿಶೇಷ ಮೆರುಗು ನೀಡಲಿದ್ದಾರೆ. ಜನ, ಗೋವು ಹಾಗೂ ದೇವರು ತ್ರಿವೇಣಿ ಸಂಗಮ. ಇದು ಗೋಸೌಖ್ಯ ಕೇಂದ್ರ. ಗೋವುಗಳು ಸುಖವಾಗಿರಬೇಕು. ಗೋಸ್ವರ್ಗದ ಪರಿಕಲ್ಪನೆಯ ಮೂಲ. ಗೋವು ಸುಖವಾಗಿದ್ದರೆ, ಭೂಮಿ ಸ್ವರ್ಗವಾಗುತ್ತದೆ ಎಂದು ಶ್ರೀಗಳು ನುಡಿದರು.
ಪ್ರಕೃತಿಯ ರಮ್ಯ ತಾಣದ ನಡುವೆ ನಂದಿಶಾಲೆ, ಬಾಲವತ್ಸ ಶಾಲೆ, ಹಾಲು ಕರೆಯುವ ಹಸುಗಳಿಗೆ ಧೇನು, ಪ್ರತೀಕ್ಷಾ ಶಾಲೆ, ವತ್ಸ ಶಾಲೆ, ಗೋಸಾಕಾಣಿಕೆ ಚರಿತ್ರೆಯಲ್ಲೇ ಪ್ರಥಮ ಎನಿಸಿದ ಪ್ರಸವ ಶಾಲೆ, ಮುದಿ ಹಾಗೂ ಅಶಕ್ತ ಹಸುಗಳಿಗೆ ಕರುಣಾ ಭರಣ, ಸರ್ವ ಸುಸಜ್ಜಿತ ಪಶು ಚಿಕಿತ್ಸಾಲಯ, ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಪ್ರಯೋಗಾಲಯ, ಪಂಚಗವ್ಯ ಚಿಕಿತ್ಸೆಗಾಗಿ ಸುಸಜ್ಜಿತ ನಿರಾಮಯ ಆಸ್ಪತ್ರೆ, ಗೋವಿನ ಬಗೆಗಿನ ಚಿತ್ರಗಳ ಪ್ರದರ್ಶನಕ್ಕೆ ಥಿಯೇಟರ್, ಗೋಮ್ಯೂಸಿಯಂ ಗವ್ಯ ಆಹಾರ ವ್ಯವಸ್ಥೆಯಂಥ ಸೌಲಭ್ಯವಿದೆ ಎಂದು ಶ್ರೀಗಳು ತಿಳಿಸಿದರು.